ಡಿಸಿಎಂ ಶಿವಕುಮಾರ್‌ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ; ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟನೆ

Most read

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಕೇಂದ್ರ ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ ತಳ್ಳಿಹಾಕಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಘರ್ಷಣೆ ಕುರಿತು ಡಿಸಿಎಂ ಶಿವಕುಮಾರ್‌ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗೃಹ ಸಚಿವರು ಹೆಬ್ಬಟ್ಟೇ ಎಂದು ಪ್ರಶ್ನಿಸಿದ್ದರು.

ಶಿವಕುಮಾರ್ ಅವರು ಓರ್ವ ಜವಾಬ್ದಾರಿಯುತ ಸಚಿವರು ಮತ್ತು ಉಪಮುಖ್ಯಮಂತ್ರಿ. ಉಪಮುಖ್ಯಮಂತ್ರಿ ಆದರೂ  ಸಂವಿಧಾನದ ಪ್ರಕಾರ ಅವರಿಗೆ ಹೆಚ್ಚುವರಿ ಅಧಿಕಾರವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದು ಸರಿ ಇರಬಹುದು. ಆದರೆ, ಸರ್ಕಾರಿ ಪ್ರತಿನಿಧಿಯಾಗಿ ಅವರು ಬಳ್ಳಾರಿಗೆ ಹೋಗುವುದನ್ನು ತಪ್ಪು ಎಂದು ಹೇಳಲಾಗದು. ಅವರು ಜವಬ್ದಾರಿಯುತ ಸಚಿವ ಮತ್ತು ಉಪಮುಖ್ಯಮಂತ್ರಿ ಜವಾಬ್ದಾರಿಯೊಂದಿಗೆ ಅಲ್ಲಿಗೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಾನು ಹೋಗಲು ಸಾಧ್ಯವಾಗಿರಲಿಲ್ಲ. ಅವರು ಹೋಗಿ ಮೃತ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಿದ್ದಾರೆ ಎಂದರು.

 ಯಾರ ಅನುಮತಿ ಪಡೆದು ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅನುಮತಿಯ ಅಗತ್ಯ ಬೇಕಿಲ್ಲ. ಅವರು ಸರ್ಕಾರಿ ಪ್ರತಿನಿಧಿ ಎಂದು ಸಮಜಾಯಿಷಿ ನೀಡಿದರು.

ಸಚಿವ ಸಂಪುಟ ಎಂದರೆ ಸಾಮೂಹಿಕ ಜವಾಬ್ದಾರಿ, ಅದನ್ನು ಹಸ್ತಕ್ಷೇಪ ಎಂದು ಹೇಳಲಾಗದು. ಅವರು ಮಧ್ಯಪ್ರವೇಶಿ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದರೆ ಮತ್ತು ಬೇರೆಯದೇ ಪರಿಣಾಮವನ್ನು ಬೀರಿದ್ದರೆ, ನಾನು ಹಸ್ತಕ್ಷೇಪದ ಆರೋಪಗಳನ್ನು ಸ್ವೀಕರಿಸುತ್ತಿದ್ದೆ. ಶಿವಕುಮಾರ್ ಗೃಹ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಮುಖ್ಯಮಂತ್ರಿ ಮತ್ತು ನಾನು ಗೃಹ ಇಲಾಖೆಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

More articles

Latest article