Wednesday, January 7, 2026

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಬಲ್ಲವರೇ ಉದ್ಯೋಗಿಗಳಾಗಬೇಕು: ಶಿಕ್ಷಣ ಇಲಾಖೆಗೆ ಕ.ಅ.ಪ್ರಾ.ಅಧ್ಯಕ್ಷ ಬಿಳಿಮಲೆ ಸೂಚನೆ

Most read

ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿರುವ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಲಯದ ವಾರ್ಡನ್ ಒಬ್ಬರು ಕನ್ನಡ ಭಾಷೆಯ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿರುವುದು ನಾಡಿನಲ್ಲಿ ಉದ್ಭವಿಸುತ್ತಿರುವ ಭಾಷಾ ಸಂಘರ್ಷದ ತೀವ್ರತೆಯನ್ನು ಅಭಿವ್ಯಕ್ತಿಸುತ್ತದೆ ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ಅಗೌರವವನ್ನು ತೋರಿದ ವಾರ್ಡನ್ ಅನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಅವರ ವಿರುದ್ಧ ಪೊಲೀಸ್ ಪ್ರಕರಣವು ದಾಖಲಾಗಿದೆ ಎನ್ನುವ ಮಾಹಿತಿಯನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ವತಿಯಿಂದ ಪಡೆದ ಬಳಿಕ, ಪ್ರತಿಕ್ರಿಯಿಸಿದ ಬಿಳಿಮಲೆ, ನೌಕರರ ವಜಾ ವಿಷಯ ಸ್ವಾಗತಾರ್ಹವಾರೂ ಇಂತಹ ಪ್ರಕರಣಗಳು ಸರ್ಕಾರದ ಜವಾಬ್ದಾರಿಯನ್ನು ಸಹ ನೆನಪಿಸುತ್ತವೆ ಎಂದರು.

ಇಂದು ಎಎಂಸಿ ಕಾಲೇಜಿನಲ್ಲಿ ಜರುಗಿದ ಪ್ರಕರಣ ನಾಳೆ ಮತ್ತೊಂದು ಸಂಸ್ಥೆಯಲ್ಲಿ ಘಟಿಸದೆನ್ನುವ ಯಾವ ಭರವಸೆಯನ್ನು ನಾವು ಹೊಂದುವ ಹಾಗಿಲ್ಲವೆಂದ ಅವರು, ಕೂಡಲೇ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಬಲ್ಲ ಹಾಗೂ ಕನ್ನಡದ ಕುರಿತಂತೆ ಗೌರವವನ್ನು ಹೊಂದಿದ ಅಭ್ಯರ್ಥಿಗಳನ್ನು ಮಾತ್ರ ನೇಮಿಸಿಕೊಳ್ಳಬೇಕೆಂಬ ನಿರ್ದೇಶನವನ್ನು ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆಗೆ ಸಲ್ಲಬೇಕಾದ ಗೌರವವನ್ನು ನೀಡಬೇಕಿದೆ ಎಂದ ಬಿಳಿಮಲೆ, ಸರ್ಕಾರದ ಇಲಾಖೆಗಳು ಈ ನಿಟ್ಟಿನಲ್ಲಿ ಸ್ವ-ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿದಲ್ಲಿ ಸಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

More articles

Latest article