ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಮಾನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಬಲ ಸಾಕ್ಷ್ಯಾಧಾರಗಳು ಲಭಿಸಿದ್ದು, 60 ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಡಿಜಿಪಿ ರಾಮಚಂದ್ರ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃತ್ಯ ನಡೆದ ವಿವೇಕಾನಂದ ದೊಡಮನಿ ಅವರ ಮನೆ ಎದುರು ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮಾನ್ಯಾ ಅವರನ್ನು ಕೊಲೆ ಮಾಡಿರುವ ದೃಶ್ಯಗಳು ಪತ್ತೆಯಾಗಿವೆ. ಜತೆಗೆ ಕೆಲವು ಆರೋಪಿಗಳ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದ್ದು, ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ದೊಷಾರೋಪ ಪಟ್ಟಿ ಸಲ್ಲಿಕೆ ನಂತರ ವಿಚಾರಣೆ ಮುಗಿಸಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಪ್ರಮುಖವಾಗಿ 14 ಮಂದಿಯೆ ಹೆಸರನ್ನು ನಮೂದಿಸಲಾಗಿದೆ. ಈಗಾಗಲೇ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೊಂದು ಘೋರ ಅಪರಾಧವಾಗಿದ್ದು, ನೊಂದವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ರಾಜ್ಯದಲ್ಲಿ ವರ್ಷಕ್ಕೆ 2,300 ರಿಂದ 2,500ದಷ್ಟು ಪ್ರಕರಣ ದಾಖಲಾಗುತ್ತಿದೆ. ಶೇ. 10 ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ. ಕಳೆದ ಹತ್ತು ವರ್ಷಗಳ ಪ್ರಕರಣಗಳನ್ನು ಅವಲೋಕಿಸಿದಾಗ ದೂರುದಾರರೇ ಪ್ರಕರಣ ವಾಪಸ್ ಪಡೆದಿರುವುದು, ಸಾಕ್ಷ್ಯ ಹೇಳದಿರುವುದು ಅಥವಾ ಸಾಕ್ಷಿದಾರರು ದೂರ ಉಳಿದುಕೊಂಡಿರುವುದು ಕಂಡು ಬಂದಿದೆ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧಾರವಾಡ ಎಸ್ ಪಿ ಗುಂಜನ್ ಆರ್ಯ ಮಾತನಾಡಿ, ಈ ಅಪರಾಧ ಕೃತ್ಯಕ್ಕೂ ಮೊದಲು ಆರೋಪಿಗಳನ್ನು ಎರಡು ಬಾರಿ ಗ್ರಾಮೀಣ ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಆದರೂ ಅಪರಾಧ ನಡೆದಿದೆ. ಈಗಾಗಲೇ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಸಂತ್ರಸ್ಥರನ್ನು ಆಪ್ತಸಮಾಲೊಚನೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಏನಿದು ಪ್ರಕರಣ?
ಇನಾಂ ವೀರಾಪೂರ ಗ್ರಾಮದ ಮಾನ್ಯಾ ಎಂಬ ಲಿಂಗಾಯತ ಸಮುದಾಯದ ಯುವತಿ ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೂ ಕಳೆದ ವರ್ಷ ಜೂನ್ ತಿಂಗಳಲ್ಲಿ ವಿವಾಹವಾಗಿದ್ದರು. ನಂತರ ಪ್ರಾಣಭಯದಿಂದ ಹಾವೇರಿಯಲ್ಲಿ ನೆಲೆಸಿದ್ದರು. ಮಾನ್ಯಾ ಗರ್ಭಿಣಿಯಾದ ನಂತರ ಇತ್ತೀಚೆಗೆ ತಮ್ಮ ಸ್ವಗ್ರಾಮಕ್ಕೆ ಮರಳಿ ಜೀವನ ನಡೆಸುತ್ತಿದ್ದರು.
ಕುಟುಂಬದ ಮರ್ಯಾದೆ ಹೋಗಿದೆ ಎಂದು ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಆಕೆಯ ಪೋಷಕರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.

