ಬಾಂಗ್ಲಾ ಆಟಗಾರನ ಖರೀದಿ: ಅಮಿತ್‌ ಶಾ, ಐಪಿಎಲ್‌, ಬಿಸಿಸಿಐ ಪ್ರಶ್ನಿಸಲು ಬಿಜೆಪಿ ಮುಖಂಡರಿಗೆ ಪ್ರಿಯಾಂಕ್‌ ಖರ್ಗೆ ಸವಾಲು

Most read

ಬೆಂಗಳೂರು: ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿರುವುದಕ್ಕೆ ಕೊಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಮಾಲೀಕ, ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಟೀಕಿಸುತ್ತಿರುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಖಂಡಿಸಿದ್ದಾರೆ.

ವಿದೇಶಿ ಆಟಗಾರರನ್ನು ಖರೀದಿಸಲು ಬಿಸಿಸಿಐ ಮತ್ತು ಐಪಿಎಲ್‌ ನ ನಿಯಮಗಳು ಅವಕಾಶ ಮಾಡಿಕೊಟ್ಟಿವೆ. ಹಾಗಾಗಿ ಬಿಜೆಪಿ ಮತ್ತು ಅದರ ವಿಚಾರ ಪರಿವಾರಗಳು ಬಿಸಿಸಿಐ ಮತ್ತು ಐಪಿಎಲ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಪ್ರಶ್ನಿಸಲಿ ಎಂದು ಸವಾಲು ಹಾಕಿದ್ದಾರೆ.

ಪಹಲ್ಗಾಮ್‌ ದಾಳಿ ನಡೆದ ಬೆನ್ನಲ್ಲೇ ಭಾರತ ದೇಶವು ಪಾಕಿಸ್ತಾನದ ಜನತೆ ಜತೆ ಕ್ರಿಕೆಟ್‌ ಪಂದ್‌ ಆಡಿದರೆ ಬಿಜೆಪಿಗೆ ಸಮಸ್ಯೆ ಕಾಣಿಸುವುದಿಲ್ಲ. ಕೋವಿಡ್‌ ಸಂದರ್ಭದಲ್ಲಿ ಐಪಿಎಲ್‌ ಪಂದ್ಯಗಳನ್ನು ಇಸ್ಲಾಂ ದೇಶಗಳಿಗೆ ಸ್ಥಳಾಂತರಿಸಿದರೆ ಸಮಸ್ಯೆ ಕಾಣಿಸುವುದಿಲ್ಲ. ಬಿಜೆಪಿ ಮುಖಂಡರು ಫ್ರಾಂಚೈಸಿಗಳನ್ನು ಪ್ರಶಿಸುವುದಕ್ಕೆ ಬದಲಾಗಿ ಈ ರೀತಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಗೃಹ ಸಚಿವ ಅಮಿತ್‌ ಶಾ ಅವರನ್ನು ಪ್ರಶ್ನಿಸಲಿ ಎಂದು ಸವಾಲು ಹಾಕಿದ್ದಾರೆ. ತಮಗೆ ಅನುಕೂಲವಾಗುವ ಹಾಗೆ ಬಿಜೆಪಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತದೆ ಎಂದೂ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೊಲ್ಕತ್ತ ನೈಟ್ ರೈಡರ್ಸ್ ತಂಡ, ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ರೂ. 9.20 ಕೋಟಿ ನೀಡಿ ಖರೀದಿಸಿತ್ತು. ಇದನ್ನು ಉತ್ತರ ಪ್ರದೇಶದ ಬಿಜಿಪಿ ಮುಖಂಡ ಹಾಗೂ ಮಾಜಿ ಶಾಸಕ ಸಂಗೀತ್ ಸೋಮ್ ಖಂಡಿಸಿದ್ದರು. ಅವರು ನಟ ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದೂ ಜರಿದಿದ್ದರು.

ಒಂದು ಕಡೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಮತ್ತೊಂದೆಡೆ ಆ ದೇಶದ ಆಟಗಾರರಿಗೆ ಐಪಿಎಲ್ ಆಡಲು ಕೋಟಿ ಕೋಟಿ ಹಣ ಕೊಟ್ಟು ಖರೀದಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.

More articles

Latest article