ಬಳ್ಳಾರಿ: ಬಳ್ಳಾರಿ ನಗರದ ಅವ್ವಂಬಾವಿಯಲ್ಲಿರುವ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಕಳೆದ ರಾತ್ರಿ ಬ್ಯಾನರ್ ಅಳವಡಿಕೆಗೆ ಸಂಬಂಧಪಟ್ಟಂತೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಜನಾರ್ದನ ರೆಡ್ಡಿ ಅವರ ಆಪ್ತರು ಹಾರಿಸಿದ ಗನ್ ನಿಂದ ಗುಂಡು ಹಾರಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವರು ಮೃತಪಟ್ಟಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಆರೋಪಿಸಿದ್ದಾರೆ.
ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದ್ದು, ನಾಳೆ ಪ್ರತಿಮೆ ಅನಾವರಣ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ.
ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರು ಆಧರಿಸಿ ಬ್ರೂಸ್ ಪೇಟೆ ಠಾಣೆಯಲ್ಲಿ ಜ.1ರ ನಡುರಾತ್ರಿ 1ಗಂಟೆ ವೇಳೆಗೆ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಎ-1 ಆರೋಪಿ, ಸೋಮಶೇಖರ ರೆಡ್ಡಿ ಎ-2, ಶ್ರೀರಾಮುಲು ಎ-3, ಬಳ್ಳಾರಿ ಪಾಲಿಕೆ ಪ್ರತಿಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ ಎ-4 ಮಾಡಲಾಗಿದ್ದು, ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬ್ಯಾನರ್ ಗಳನ್ನು ಕಟ್ಟಲಾಗುತ್ತಿತ್ತು. ನಿನ್ನೆ ಸಂಜೆ ಸಿರುಗುಪ್ಪ ರಸ್ತೆಯಲ್ಲಿರುವ ಜನಾರ್ಧನ ರೆಡ್ಡಿ ನಿವಾಸದ ಬಳಿ ಕಟ್ಟಲಾಗಿದ್ದ ಬ್ಯಾನರ್ ಗಳನ್ನು ಜನಾರ್ದನ ರೆಡ್ಡಿ ಮತ್ತು ಇತರರು ಕಿತ್ತುಹಾಕಿದ್ದರು. ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಅವರ ಬೆಂಬಲಿಗರು ಉದ್ದೇಶಪೂರ್ವಕವಾಗಿ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ ಎಂದು ಭರತ್ ರೆಡ್ಡಿ ಅವರ ಸಹಾಯಕ ಸತೀಶ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸತೀಶ್ ರೆಡ್ಡಿ ಮತ್ತು ಅವರ ಗನ್ ಮ್ಯಾನ್ ಬಸವರಾಜ್ ಜೊತೆಯೂ ಮಾತಿನ ಚಕಮಕಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಗಾಯಗೊಂಡಿದ್ದಾರೆ ಎಂದು ಚನಾಲ್ ಶೇಖರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದ್ದಾರೆ.

