ಕನ್ನಡದಲ್ಲೇ ನ್ಯಾಕ್ ಪತ್ರ ವ್ಯವಹಾರ: ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಪುರುಷೋತ್ತಮ ಬಿಳಿಮಲೆ ಸ್ವಾಗತ

Most read

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯ ಮೇರೆಗೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಖಾಸಗಿ, ಅನುದಾನಿತ ಹಾಗೂ ಬಿ.ಎಡ್ ಕಾಲೇಜುಗಳಲ್ಲಿ ನ್ಯಾಕ್ ಗೆ ಸಂಬಂಧಿಸಿದಂತೆ ನಡೆಸುವ ಪತ್ರ ವ್ಯವಹಾರಗಳನ್ನು ಕನ್ನಡ ಭಾಷೆಯಲ್ಲೇ ನಡೆಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ.

ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಬಿಳಿಮಲೆ ಅವರು, ಈ ಸುತ್ತೋಲೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಸಾರ್ವಭೌಮತೆಯನ್ನು ಮರುಸ್ಥಾಪಿಸಲಿದ್ದು, ವಿಶೇಷವಾಗಿ ಕನ್ನಡ  ಅಧ್ಯಾಪಕರುಗಳ ಮೇಲೆ ಹೇರಲಾಗುತ್ತಿರುವ ಮಾನಸಿಕ ಹೊರೆಯನ್ನು ಇಳಿಸಲಿದೆ. ಇನ್ನು ಮುಂದೆ ಕನ್ನಡದ ಅಧ್ಯಾಪಕರುಗಳು ನ್ಯಾಕ್ ಸಮೀಕ್ಷೆ ತಯಾರಿಗೆ ಅಗತ್ಯ ಮಾಹಿತಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ದೊರಕಿಸಬೇಕೆಂದು ಕರೆ ನೀಡಿರುವ ಅವರು, ಅವಶ್ಯಕವೆನ್ನಿಸಿದಲ್ಲಿ ವಿಶ್ವವಿದ್ಯಾಲಯಗಳು ಇದನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿಕೊಂಡು ನ್ಯಾಕ್ ಸಂಸ್ಥೆಗೆ ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ನ್ಯಾಕ್ ಸಮಿತಿಗೆ ಸಲ್ಲಿಕೆಯಾಗುವ  ಮಾಹಿತಿಗಳನ್ನು ಪರಾಮರ್ಶಿಸುವಲ್ಲಿ ಆಯಾ ರಾಜ್ಯಗಳ ರಾಜಭಾಷೆಯನ್ನು ಬಲ್ಲ ಪ್ರತಿನಿಧಿಗಳು ಸಮಿತಿಯ ಸದಸ್ಯತ್ವವನ್ನು ಹೊಂದಿರಬೇಕಾಗುತ್ತದೆ ಎಂದಿರುವ ಬಿಳಿಮಲೆ, ಇದು ನ್ಯಾಕ್ ಸಮಿತಿಯು ತನ್ನ ಆಡಳಿತವನ್ನು ಸುಗಮವಾಗಿ ನಿರ್ವಹಿಸಲು ಅನುಕೂಲ ಮಾಡಿಕೊಡುವುದಲ್ಲದೇ, ಈ ಕುರಿತಂತೆ ಶಿಕ್ಷಣ ಸಂಸ್ಥೆಗಳು ಪ್ರಸ್ತುತ ಎದುರುಗೊಳ್ಳುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

More articles

Latest article