ಬೆಂಗಳೂರು: ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರಿ ಮನೆಗೆ ಮರಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ! ಬೆಂಗಳೂರು ಮಹಾನಗರ ಸಾರಿಗೆ ನಿಗಮ ( ಬಿಎಂಟಿಸಿ) ಇಂದು ತಡರಾತ್ರಿಯವರೆಗೂ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಮಧ್ಯರಾತ್ರಿ ಬಸ್ ಸೇವೆಗಳನ್ನು ಒದಗಿಸಲಿದೆ. ಇಂದು ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆಯವರೆಗೆ ವಿಶೇಷ ಬಸ್ ಸೇವೆಗಳು ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರ ಬೇಡಿಕೆ ಹೆಚ್ಚಾದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗುವುದೆಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ ನಮ್ಮ ಮೆಟ್ರೋ ಕೂಡ ವಿಶೇಷ ರೈಲುಗಳನ್ನು ಓಡಿಸಲಿದೆ.
ವಿಶೇಷ ಬಸ್ಗಳು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮತ್ತು ಬ್ರಿಗೇಡ್ ರಸ್ತೆಯಿಂದ ಹೊರಟು ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಎಚ್ಬಿ ಕ್ವಾರ್ಟರ್ಸ್, ಜನಪ್ರಿಯ ಟೌನ್ಶಿಪ್, ನೆಲಮಂಗಲ, ಯಲಹಂಕ (ಉಪನಗರ 5ನೇ ಹಂತ ಸೇರಿ), ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿದಂತೆ ಹಲವು ಪ್ರದೆಶಗಳಿಗೆ ಬಸ್ ಸಂಚಾರ ಇರಲಿದೆ. ಈ ಕಾರಿಡಾರ್ಗಳಿಗೆ ಜಿ-ಸರಣಿ ಹಾಗೂ ನಿಯಮಿತ ಮಾರ್ಗದ ಬಸ್ ಗಳು ಸಂಚರಿಸಲಿವೆ.
ಮಾರ್ಗ ಮತ್ತು ಬಸ್ ಸಂಖ್ಯೆಗಳ ವಿವರ:
ಬ್ರಿಗೇಡ್ ರಸ್ತೆಯಿಂದ
ಎಲೆಕ್ಟ್ರಾನಿಕ್ಸ್ ಸಿಟಿ – ಜಿ-3; ಜಿಗಣಿ – ಜಿ-4
ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ:
ಸರ್ಜಾಪುರ – ಜಿ-2; ಕೆಂಗೇರಿ ಕೆಎಚ್ಬಿ ಕ್ವಾರ್ಟರ್ಸ್ – ಜಿ-6; ಜನಪ್ರಿಯ ಟೌನ್ಶಿಪ್ – ಜಿ-7; ನೆಲಮಂಗಲ – ಜಿ-8; ಯಲಹಂಕ ಉಪನಗರ 5ನೇ ಹಂತ – ಜಿ-9; ಯಲಹಂಕ – ಜಿ-10; ಬಾಗಲೂರು – ಜಿ-11; ಹೊಸಕೋಟೆ – 317-ಜಿ; ಚನ್ನಸಂದ್ರ / ಕಾಡುಗೋಡಿ – ಎಸ್ಬಿಎಸ್-13ಕೆ; ಬನಶಂಕರಿ – 13 ಗೆ ಬಸ್ಗಳು ಸಂಚರಿಸಲಿವೆ.
ವಿಶೇಷ ಮೆಟ್ರೋ ಸೇವೆ:
ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸೇವಾ ಅವಧಿಯನ್ನು ವಿಸ್ತರಿಸಿದೆ. ಆದರೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಭದ್ರತಾ ಕಾರಣಗಳಿಗಾಗಿ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ತಡರಾತ್ರಿ 2 ಗಂಟೆಯವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲಿದೆ. ಟ್ರಿನಿಟಿ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಗಳಿಂದ ಪ್ರಯಾಣಿಸಬಹುದಾಗಿದೆ.
ನೇರಳೆ ಮಾರ್ಗ:
ಬೈಯಪ್ಪನಹಳ್ಳಿ-ಕೆಂಗೇರಿ ಮಾರ್ಗ: 1:45ರವರೆಗೆ
ಕೆಂಗೇರಿ- ಬೈಯಪ್ಪನಹಳ್ಳಿ ಮಾರ್ಗ: ರಾತ್ರಿ 2ರವರೆಗೆ
ಹಸಿರು ಮಾರ್ಗ:
ಮೆಜೆಸ್ಟಿಕ್ – ಮಾದಾವರ: ರಾತ್ರಿ 2ರವರೆಗೆ
ಮಾದಾವರ – ಮೆಜೆಸ್ಟಿಕ್: ರಾತ್ರಿ 2ರವರೆಗೆ
ಹಳದಿ ಮಾರ್ಗ:
ಆರ್ವಿ ರಸ್ತೆ – ಬೊಮ್ಮಸಂದ್ರ ಮಾರ್ಗ: ರಾತ್ರಿ 3:10ರವರೆಗೆ
ಬೊಮ್ಮಸಂದ್ರ – ಆರ್ವಿ ರಸ್ತೆ: 1:30ರವರೆಗೆ
ಮೆಜೆಸ್ಟಿಕ್ ಕೇಂದ್ರದಲ್ಲಿ ಎಲ್ಲಾ ಮಾರ್ಗಗಳ ಕೊನೆಯ ರೈಲು ರಾತ್ರಿ 2:45ಕ್ಕೆ ಇರಲಿದೆ.
ಇಂದು ರಾತ್ರಿ 11 ಗಂಟೆಯಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ, ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲು ಸಂಚರಿಸಲಿವೆ. ಭದ್ರತಾ ಕಾರಣಗಳಿಗಾಗಿ ಇಂದು ರಾತ್ರಿ 11 ಗಂಟೆಯ ನಂತರ ಟಿಕೆಟ್ ವಿತರಣೆ ಕೂಡ ಬಂದ್ ಮಾಡಲಾಗುತ್ತದೆ. ಈ ಸಮಯದಲ್ಲಿ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲೂ ಕೌಂಟರ್ ಬಂದ್ ಆಗಲಿದೆ. ಪ್ರಯಾಣಿಕರು ಕ್ಯೂಆರ್ ಕೋಡ್ ಅಥವಾ ಡಿಜಿಟಲ್ ಟಿಕೆಟ್ ಬಳಸಿ ಪ್ರಯಾಣಿಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.

