ಬೆಂಗಳೂರು: ಹೊಸ ವರ್ಷ- 2026 ಸ್ವಾಗತಿಸಲು ಬೆಂಗಳೂರು ಸಜ್ಜಾಗಿದೆ. ಸಂಭ್ರಮಾಚರಣೆ ಕಳೆಗಟ್ಟುವ ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ಮೊದಲಾದ ಬಡಾವಣೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ವಿಶೇಷವಾಗಿ ಪಬ್, ಬಾರ್, ಕ್ಲಬ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ.
ನಗರ ಪೊಲೀಸರು ಸಾರ್ವಜನಿಕ ಸುರಕ್ಷತೆಗಾಗಿ ಹಲವಾರು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭದ್ರತಾ ಕ್ರಮಗಳ ಮಾಹಿತಿ ಹಂಚಿಕೊಂಡಿದ್ದು, ಮಹಿಳೆಯರ ಸುರಕ್ಷತೆ , ಹೆಚ್ಚುವರಿ ಅವಧಿಗೆ ಮೆಟ್ರೋ ರೈಲು ಸಂಚಾರ, ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಸುಮಾರು 20,000 ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಮಹಿಳೆಯರು ಮತ್ತು ಯುವಜನರ ರಕ್ಷಣೆಗೆ ಒತ್ತು ನೀಡಿ ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ರೂಪಿಸಿದ್ದಾರೆ. ಎಂ.ಜಿ.ರೋಡ್ ಗೆ ಹೊಂದಿಕೊಂಡಿರುವ ಸಿಬಿಡಿ ಪ್ರದೇಶಗಳು, ಕೋರಮಂಗಲ, ಇಂದಿರಾನಗರ, ವೈಟ್ ಫೀಲ್ಡ್, ನೀಲಾದ್ರಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೆಂಗಳೂರು ನಗರದ ಇತರೆ ಮಾಲ್ಗಳಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಹೆಚ್ಚಿನ ಜನಸಂದಣಿ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸಾರ್ವಜನಿಕ ಪ್ರದೇಶಗಳು ಮತ್ತು ಕಾರ್ಯಕ್ರಮ ಸ್ಥಳಗಳಲ್ಲಿ ಕೆಳಕಂಡ ಕ್ರಮಗಳನ್ನು ಜಾರಿಗೊಳಿಸಲಾಗಿದೆ:
1. ಹೆಚ್ಚುವರಿ ನಿಗಾವಣೆಗಾಗಿ ಆಯಾಕಟ್ಟಿನ ಸ್ಥಳಗಳಲ್ಲಿ ವಾಚ್ ಟವರ್ಗಳ ನಿಯೋಜನೆ.
2. ಸುರಕ್ಷಿತ ವಲಯಗಳು ಹಾಗೂ ಹವಾಮಾನ ಅನಿಶ್ಚಿತತೆಗೆ ದೃಶ್ಯ ಸೂಚಕವಾಗಿ ಅಂಬ್ರೆಲಾಗಳ ನಿಯೋಜನೆ.
3. ಸಹಾಯ ಹಾಗೂ ಯಾವುದೇ ಆತಂಕಗಳ ವರದಿಗಾಗಿ ಮಹಿಳಾ ಸಹಾಯ ಕೇಂದ್ರಗಳ ಸ್ಥಾಪನೆ.
4. ಜನಸಂದಣಿ ನಿಯಂತ್ರಣ ಮತ್ತು ಗದ್ದಲ ಕಡಿಮೆ ಮಾಡಲು ಮೆಟ್ರೋ ಸಮಯಾವಧಿಗಳ ವಿಸ್ತರಣೆ.
5. ಪ್ರಯಾಣ ಸುಗಮಗೊಳಿಸಿ ವಿಳಂಬ ತಗ್ಗಿಸಲು ಬಸ್ ಸೇವೆಗಳ ಸಮಯಾವಧಿ ಹೆಚ್ಚಿಸಲಾಗಿದೆ.
6. ಸುರಕ್ಷತೆ ಮತ್ತು ನಿಗಾವಣೆ ಬಲಪಡಿಸಲು ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ನವೀಕರಣ.
7. ಶಿಸ್ತು ಮತ್ತು ಸುರಕ್ಷತೆ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ.
8. ಹೋಟೆಲ್ಗಳು ಮತ್ತು ಲಾಡ್ಜ್ಗಳಲ್ಲಿ ಹೆಚ್ಚುವರಿ ಪರಿಶೀಲನೆ ಹಾಗೂ ನಿಯಮ ಪಾಲನೆ ಪರಿಶೀಲನೆ.
9. ಮದ್ಯಪಾನ ಚಾಲನೆ ಮತ್ತು ವೀಲಿಂಗ್ ಮೇಲಿನ ಕಠಿಣ ನಿಗಾ ಹಾಗೂ ಕಟ್ಟುನಿಟ್ಟಿನ ಜಾರಿ.
10. ಸೀಮಿತ ಸಾಮರ್ಥ್ಯದ ಸ್ಥಳಗಳಿಗೆ ಜನಸಂದಣಿ ಪ್ರವೇಶ ನಿರ್ಬಂಧ: ಜನಸಂದಣಿ ತಪ್ಪಿಸಲು ಪ್ರವೇಶ ಮತ್ತು ನಿರ್ಗಮನ ನಿಯಂತ್ರಣ.
11. ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಕೆಲವು ವಲಯಗಳಲ್ಲಿ ವಾಹನ ಸಂಚಾರ ನಿರ್ಬಂಧ.
12. ಪ್ರವೇಶ ದ್ವಾರಗಳಲ್ಲಿ ಸ್ಪಷ್ಟ ಘೋಷಣೆಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆಗಳು.
13. ಪಬ್ಗಳಲ್ಲಿ ಉಂಟಾಗುವ ಕಿರಿಕಿರಿ ತಕ್ಷಣವೇ ನಿಯಂತ್ರಿಸಲಾಗುವುದು: ಅಗತ್ಯವಿದ್ದರೆ ಸಂಬಂಧಪಟ್ಟ ಸ್ಥಳದ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು,
14. ಕಿರಿಕಿರಿ ಉಂಟುಮಾಡುವವರ ವಿರುದ್ಧ, ಸಮಾಜ ವಿರೋಧಿ ಅಂಶಗಳನ್ನು ತಡೆಗಟ್ಟಲು ಮುಖ ಗುರುತಿಸುವಿಕೆಯ ನಿಗಾವಹಣ ಕ್ಯಾಮೆರಾ ಆಳವಡಿಸಿದ್ದು. ಈ ಮೂಲಕ ಅಕ್ರಮ ಕಂಡುಬಂದಲ್ಲಿ ಕಠಿಣ ಕ್ರಮ.
15. ಕ್ಯೂಆರ್ಟಿ, ಚೆನ್ನಮ್ಮ ಪಡೆ ಮೊದಲಾದ ವಿಶೇಷ ಪಡೆಗಳ ನಿಯೋಜನೆ.
16. ಹೆಚ್ಚುವರಿ ಸೇವೆಗಳಿಗೆ ಓಲಾ/ಉಬರ್/ರಾಪಿಡೋ ಸಂಸ್ಥೆಗಳ ಸಹಕಾರ: ವಿಶೇಷವಾಗಿ ಮಹಿಳಾ ಕ್ಯಾಬ್ ಚಾಲಕರ ನಿಯೋಜನೆಗೆ ಆದ್ಯತೆ.
17. ಮಧ್ಯರಾತ್ರಿ ಸಂಭ್ರಮದ ನಂತರ ಜನಸಂದಣಿಯನ್ನು ತೆರವುಗೊಳಿಸಲು, ಮೊದಲ ಬಾರಿಗೆ ಬಸ್ ಗಳು ಮತ್ತು ಟೆಂಪೋ ಟ್ರಾವೆಲರ್ ಗಳನ್ನು ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.
ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳಿಂದ ಜಂಟಿ ಪರಿಶೀಲನೆಗಳನ್ನು ನಡೆಸಲಾಗಿದ್ದು, ನಿಯಮ ಪಾಲನೆ ಖಚಿತಪಡಿಸಿಕೊಳ್ಳಲು ಹಾಗೂ ತಿದ್ದುಪಡಿ ಕ್ರಮ ಕೈಗೊಳ್ಳಲು ಸಮನ್ವಿತ ಪರಿಶೀಲನೆಗಳನ್ನು ಕೈಗೊಳ್ಳಲಾಗಿದೆ. ಗದ್ದಲ ಮತ್ತು ತುಳಿತ ಸಂಭವಿಸದಂತೆ ತಡೆಯುವ ಉದ್ದೇಶದಿಂದ ಪ್ರಮುಖ ಮಾರ್ಗಗಳಿಗೆ (ಉದಾ: ಬ್ರಿಗೇಡ್ ರಸ್ತೆ) ಜನಸಂದಣಿಯ ಮರುಸಂಚಾರವನ್ನು ಅನುಮತಿಸಲಾಗುವುದಿಲ್ಲ.
ಯಾವುದೇ ಕಿಡಿಗೇಡಿತನ ಅಥವಾ ಉಲ್ಲಂಘನೆಗಳನ್ನು ಪತ್ತೆಹಚ್ಚಿ ದಾಖಲೀಕರಿಸಿ ತ್ವರಿತ ಕ್ರಮ ಕೈಗೊಳ್ಳಲು “ಮ್ಯಾಜಿಕ್ ಬಾಕ್ಸ್” ವ್ಯವಸ್ಥೆಯೊಂದಿಗೆ ನಿರಂತರ ಸಿಸಿಟಿವಿ ನಿಗಾವಹಣೆ ಕೈಗೊಳ್ಳಲಾಗುತ್ತದೆ.
ಮಹಿಳೆಯರು ಮತ್ತು ಯುವಜನರ ಸುರಕ್ಷತಾ ನಿಯಮಾವಳಿಗಳು:
ಪ್ರಮುಖ ಕೇಂದ್ರಗಳು ಮತ್ತು ಪ್ರವೇಶ ದ್ವಾರಗಳಲ್ಲಿ ಸಮರ್ಪಿತ ಮಹಿಳಾ ಸಹಾಯ ಕೇಂದ್ರಗಳ ಸ್ಥಾಪನೆ, ಪಟ್ರೋಲ್ ಮತ್ತು ಪ್ರತಿಕ್ರಿಯಾ ತಂಡಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಹೆಚ್ಚುವರಿ ನಿಯೋಜನೆ, ಸುರಕ್ಷಿತ ವಲಯಗಳು ಹಾಗೂ ನಿರ್ಗಮನ ದ್ವಾರಗಳು ಮತ್ತು ಸಾರಿಗೆ ಕೇಂದ್ರಗಳಿಗೆ ಸ್ಪಷ್ಟವಾಗಿ ಗುರುತಿಸಲಾದ ಮಾರ್ಗಗಳು, ಕಿರುಕುಳ ಅಥವಾ ಅಸುರಕ್ಷಿತ ಪರಿಸ್ಥಿತಿಗಳ ಕುರಿತು ದೂರು ಬಂದಲ್ಲಿ ತಕ್ಷಣ ಸ್ಪಂದಿಸುವ ಪ್ರತಿಕ್ರಿಯಾ ತಂಡಗಳು.
ಸಾರ್ವಜನಿಕರಿಗೆ ಮಾರ್ಗದರ್ಶನ: ಕಾರ್ಯಕ್ರಮ ಸ್ಥಳಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ಸಾರ್ವಜನಿಕ ಘೋಷಣೆಗಳು ಹಾಗೂ ಸೂಚನಾ ಫಲಕಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಅಧಿಕಾರಿಗಳ ಸೂಚನೆಯಂತೆ ಸಾಮರ್ಥ್ಯ ಮಿತಿಯನ್ನು ಪಾಲಿಸಿ ಸಾಲಿನಲ್ಲಿ ನಿಲ್ಲಬೇಕು, ಯಾವುದೇ ಸಂಶಯಾಸ್ಪದ ಚಟುವಟಿಕೆಗಳನ್ನು ನಿಗದಿತ ಸಹಾಯವಾಣಿ ಅಥವಾ ಸಹಾಯ ಕೇಂದ್ರಗಳಿಗೆ ವರದಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ಮದ್ಯಪಾನವನ್ನು ತಡೆಗಟ್ಟುವ ಉದ್ದೇಶದಿಂದ ಪಬ್ ಮತ್ತು ಬಾರ್ಗಳ ಮಾಲೀಕರು ಹಾಗೂ ನಿರ್ವಾಹಕರ ಸಹಕಾರದೊಂದಿಗೆ ಕೆಲವು ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಈ ಕುರಿತು ಅವರಿಗೆ ವಿಶೇಷವಾಗಿ ಸೂಚನೆ ನೀಡಲಾಗಿದೆ, ಸಂಭ್ರಮದ ನಂತರ ಸಂಚಾರ ಸುಗಮಗೊಳಿಸಲು, ಮದ್ಯಪಾನ ಮಾಡಿದ ಸಾರ್ವಜನಿಕರು ನಿಗದಿತ ಸಾರಿಗೆ ಆಯ್ಕೆಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

