ಅರಾವಳಿ ಪರ್ವತ ಶ್ರೇಣಿಯ ನ.20ರ ವ್ಯಾಖ್ಯಾನಕ್ಕೆ ಸುಪ್ರೀಂಕೋರ್ಟ್‌ ತಡೆ: ಪರಿಸರವಾದಿಗಳ ಸ್ವಾಗತ

Most read

ನವದೆಹಲಿ: ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿ ನೀಡಿದ್ದ  ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ. ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಕೇಂದ್ರ ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ತ್ರಿಸದಸ್ಯ ರಜಾ ಪೀಠವು, ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿದೆ.

ರಾಜಸ್ಥಾನ, ಗುಜರಾತ್‌, ಹರಿಯಾಣ ರಾಜ್ಯಗಳಲ್ಲಿ ಹರಡಿಕೊಂಡಿರುವ ಅರಾವಳಿ ಜಿಲ್ಲೆಗಳಲ್ಲಿನ ನೂರು ಮೀಟರ್ ಮತ್ತು ಅದಕ್ಕಿಂತ ಎತ್ತರದ ಭೂಪ್ರದೇಶಗಳನ್ನು ಅರಾವಳಿ ಬೆಟ್ಟಗಳು ಮತ್ತು 500 ಮೀಟರ್‌ ಅಂತರದಲ್ಲಿರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳನ್ನು ಅರಾವಳಿ ಶ್ರೇಣಿಗಳೆಂದು ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಈ ಪ್ರಕಾರ ಅರಾವಳಿ ವ್ಯಾಪ್ತಿಯ 100 ಮೀಟರ್‌ ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದಂತಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಗುಜರಾತ್‌, ರಾಜಸ್ಥಾನ, ಹರಿಯಾಣದಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ.

ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಪರಿಸರವಾದಿ ರಾಜೇಂದ್ರ ಸಿಂಗ್:

ನವೆಂಬರ್ 20 ರಂದು ನೀಡಿದ್ದ ನಿರ್ದೇಶನಗಳಿಗೆ ತಡೆ ನೀಡಿರುವುದನ್ನು ಪರಿಸರ ಹೋರಾಟಗಾರ ರಾಜೇಂದ್ರ ಸಿಂಗ್ ಸ್ವಾಗತಿಸಿದ್ದಾರೆ. ಈ ಸಂಬಂಧ ಅವರು ಇದರಿಂದ ಅರಾವಳಿ ಬೆಟ್ಟ ಶ್ರೇಣಿಗಳ ಸಮಗ್ರತೆಗೆ ಧಕ್ಕೆಯಾಗಲಿದ್ದು, ಗಣಿಗಾರಿಕೆ ನಡೆಯುವ ಅಪಾಯ ಕುರಿತು ಕಳವಳ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ ಗೆ ಪತ್ರ ಬರೆದಿದ್ದರು.

More articles

Latest article