ಬೆಂಗಳೂರು: ಪೋಲಿಯೋ ಮುಕ್ತ ರಾಜ್ಯ ನಿರ್ಮಿಸುವ ನಿಟ್ಟಿನಲ್ಲಿ ನಾಳೆಯಿಂದ ಡಿ. 24ರ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ–2025 ಆರಂಭವಾಗಲಿದೆ. ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಕರ್ನಾಟಕ ಆರೋಗ್ಯ ಇಲಾಖೆ ಪೋಷಕರಿಗೆ ಮನವಿ ಮಾಡಿದೆ.
ಪೋಲಿಯೋ ಒಂದು ಮಾರಕ ರೋಗ. ಇದು ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯವನ್ನು ಉಂಟುಮಾಡುವ ಸಂಭವವಿರುತ್ತದೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ಬಾಲ್ಯದಲ್ಲೇ ಲಸಿಕೆ ಹಾಕಿಸುವ ಮೂಲಕ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ. ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯವನ್ನು ನಿರ್ಧರಿಸಲಿದೆ ಎಂಬ ಘೋಷವಾಕ್ಯದಡಿ ಸರ್ಕಾರ ಅಭಿಯಾನ ಆರಂಭಿಸಿದೆ.
ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ, ಪೋಲಿಯೋ ಮುಕ್ತ ದೇಶಕ್ಕೆ ಕೈಜೋಡಿಸೋಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಬಸ್, ರೆಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲ ದಿನ ಈ ಕೇಂದ್ರಗಳಲ್ಲಿ ಲಸಿಕೆ ನೀಡಿದರೆ ನಂತರ ಎರಡು ದಿನ ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಜ್ಜು:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ತನ್ನ ಐದು ನಿಗಮಗಳ ಮೂಲಕ ಒಟ್ಟು 11,34,988 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ–2025 ಅನ್ನು ಡಿಸೆಂಬರ್ 21ರಿಂದ 24, 2025ರವರೆಗೆ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸೋಣ. ಜೀವದ ಎರಡು ಹನಿಗಳಿಂದ ಪೋಲಿಯೋ ವಿರುದ್ಧ ವಿಜಯ ಸಾಧಿಸುವುದನ್ನು ಮುಂದುವರಿಸೋಣ ಎಂದು ಟ್ವೀಟ್ ಮಾಡಿದೆ.

