ಉತ್ತರ ಕರ್ನಾಟಕಕ್ಕೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ; ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ

Most read

ಬೆಳಗಾವಿ: ಕಳೆದ 20 ವರ್ಷಗಳಲ್ಲಿ ಸುಮಾರು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನೀವು ಉತ್ತರ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳು ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಸುಧೀರ್ಘ ಉತ್ತರ ನೀಡಿದ ಅವರು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಈ 11 ವರ್ಷಗಳಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ. ಅಧಿಕಾರಕ್ಕೆ ಬರುವುದಕ್ಕೆ ಮೊದಲು ನಿಮಗೆ ಉತ್ತರ ಕರ್ನಾಟಕ ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ನಿಮಗೆ ಉತ್ತರ ಕರ್ನಾಟಕ ಇದೆ. ಅದರ ಹಿತಾಸಕ್ತಿ ಕಾಪಾಡಬೇಕು ಎಂದು ಅನ್ನಿಸುವುದೇ ಇಲ್ಲ ಟೀಕಿಸಿದರು.

ಐಐಎಂ, ಏಮ್ಸ್ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ಕೇಂದ್ರದ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ನೀರಾವರಿ ಯೋಜನೆಗಳು ಸೇರಿದಂತೆ ಏನೆಲ್ಲಾ ಸಂಸ್ಥೆಗಳನ್ನು ಸ್ಥಾಪಿಸಿದ್ದೀರಿ ಎಂದು ಹೇಳಿ ಎಂದು ಕೆಣಕಿದರು. ಪ್ರಧಾನಿ ಮೋದಿ ಸರ್ಕಾರದಲ್ಲಿ ಪ್ರಹ್ಲಾದ ಜೋಶಿಯವರು ನಿರಂತರವಾಗಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಕಂದಾಯ ವಿಭಾಗದ ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾಗುವ ಎಂಪಿಗಳು ಬಹುತೇಕರು ಬಿಜೆಪಿಯವರು. ಬೆಳಗಾವಿ, ಧಾರವಾಡ, ಹಾವೇರಿ-ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಆಯ್ಕೆಯಾಗಿರುವವರು ಯಾರು? ಇಷ್ಟಿದ್ದರೂ ಕೇಂದ್ರ ಸರ್ಕಾರದ ಕೊಡುಗೆ ಏನು ಎಂದಯ ತರಾಟೆಗೆ ತೆಗೆದುಕೊಂಡರು.

ಪ್ರತಿ ಚುನಾವಣೆಯ ಸಂದರ್ಭದಲ್ಲೂ ನೀವು ಜನರಿಗ ಮೋಸ ಮಾಡುತ್ತಲೇ ಬಂದಿದ್ದೀರಿ. ಡಬಲ್ ಎಂಜಿನ್ ಸರ್ಕಾರ ಇದ್ದರೆ ಅನುಕೂಲ ಎಂದು ಹೇಳುವುದು ಮಾಮೂಲಿ ಮಾತು. ಆದರೆ 2019 ರಿಂದ 2023 ರವರೆಗೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವೆ ಇತ್ತು. ಆ ಸಂದರ್ಭದಲ್ಲಿ ಏನಾದರೂ  ಯೋಜನೆಗಳನ್ನು ಈ ಭಾಗಕ್ಕೆ ಕೊಟ್ಟಿದ್ದೀರಾ? ಉತ್ತರ ಕರ್ನಾಟಕ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ನಿಮ್ಮ ಕೊಡುಗೆಗಳೇನು? ಉತ್ತರ ಕರ್ನಾಟಕ ಅಥವಾ ಕರ್ನಾಟಕ ಕುರಿತು ಮಾತಾಡುವ ನೈತಿಕತೆ  ನಿಮಗೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರಕ್ಕೆ ಈವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿಲ್ಲ. ಮಹದಾಯಿ ಯೋಜನೆಯನ್ನು ಇತ್ಯರ್ಥ ಪಡಿಸಲಾಗಿಲ್ಲ ಎಂದರು. ಮಗೆ ನೈತಿಕತೆ ಇಲ್ಲವೆಂದು ಹೇಳಿ ನಿಮಗೆ ನಾವು ಸುಮ್ಮನಿರುವುದಿಲ್ಲ. ನಮಗೆ ನೈತಿಕತೆಯಿದೆ. ನಾವು ಸಮಗ್ರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಭಾಗದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ  ಎಂದರು.

ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ. ಇದರಲ್ಲೂ ಶೇ. 43 ರಷ್ಟು ಕ್ಷೇತ್ರಗಳು ಈ ಭಾಗದಲ್ಲಿವೆ. ಹಾಗಾಗಿ ಸರ್ಕಾರಗಳು ಜಾರಿಗೆ ತರುವ ಯೋಜನೆಗಳಲ್ಲೂ ಕನಿಷ್ಟ ಶೇ. 42 ರಿಂದ ಶೇ. 43 ರಷ್ಟಾದರೂ ಈ ಭಾಗಕ್ಕೆ ನೀಡಲೇಬೇಕು ಎಂಬುದು ನಮ್ಮ ಇರಾದೆಯಾಗಿದೆ ಎಂದರು.

More articles

Latest article