ಬೆಳಗಾವಿ: ಕರ್ನಾಟಕದಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಫಾರ್ಮಸಿ ಶಿಕ್ಷಣ ಮುಗಿಸಿ ಹೊರಬರುತ್ತಿದ್ದರೂ, ಪ್ರಾಯೋಗಿಕ ಅನುಭವದ ಕೊರತೆಯಿಂದ ಉದ್ಯೋಗ ಪಡೆಯಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಈ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರದ ಹೊಸ ಯೋಜನೆಯಂತೆ, ಅಪ್ರೆಂಟಿಸ್ ಗಳನ್ನು ನೇಮಕ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಡಿಪ್ಲೊಮಾ ಇನ್ ಫಾರ್ಮಸಿ (D.Pharma) ಪೂರ್ಣಗೊಳಿಸಿದ 1,000 ಅಭ್ಯರ್ಥಿಗಳನ್ನು ಅಪ್ರೆಂಟಿಸ್ಗಳಾಗಿ ತೊಡಗಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ.
ಆ ಪ್ರಕಾರ
* ಪರೀಕ್ಷಾ ಪ್ರಾಧಿಕಾರ ಮಂಡಳಿಯ ಮೂಲಕ ಅರ್ಹತೆಯ ಆಧಾರದ ಮೇಲೆ ಅತ್ಯಂತ ಪಾರದರ್ಶಕವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
* ಸರ್ಕಾರಿ ಕೋಟಾದಡಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ.
* ಒಟ್ಟು 11 ತಿಂಗಳ ತರಬೇತಿ ಅವಧಿಯಲ್ಲಿ, ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ಸ್ಟೈಫಂಡ್ ನೀಡಲಾಗುವುದು.
* ಹಿರಿಯ ಫಾರ್ಮಸಿಸ್ಟ್ಗಳ ಮಾರ್ಗದರ್ಶನದಲ್ಲಿ ಔಷಧ ವಿತರಣೆ, ದಾಸ್ತಾನು ನಿರ್ವಹಣೆ ಕುರಿತಂತೆ ತರಬೇತಿ ನೀಡಲಾಗುವುದು
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಫಾರ್ಮಸಿಸ್ಟ್ ಹುದ್ದೆಗಳ ನಿರ್ವಹಣೆಗಾಗಿ ಅಪ್ರೆಂಟಿಸ್ಶಿಪ್ಗೆ ಬರುವವರನ್ನೇ ನಿಯೋಜಿಸುವ ಮೂಲಕ ಇಲಾಖೆಯ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಯುವಕರಿಗೆ ವೃತ್ತಿಪರ ನೈಪುಣ್ಯತೆ ಒದಗಿಸುವುದು ನಮ್ಮ ಗುರಿ. ಯುವ ಜನರ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.

