ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಪಾವತಿಯಲ್ಲಿ ವಿಳಂಬವಾಗಿದೆ. ಹಣಕಾಸು ಇಲಾಖೆಯ ನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಹಣ ಜಮಾ ಆಗಿರುವ ಬಗ್ಗೆ ನಾನು ಸದನಕ್ಕೆ ಯಾವುದೇ ತಪ್ಪು ಮಾಹಿತಿಯನ್ನು ನೀಡಿಲ್ಲ. ಈವರೆಗೆ 23 ಕಂತುಗಳ ಹಣವನ್ನು ಫಲಾನುಭವಿಗಳ ಖಾತೆ ಸಂದಾಯ ಮಾಡಲಾಗಿದೆ ಎಂದು ತಿಳಿಸಿದ್ದೇನೆ ಎಂದೂ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ ದಿನದಿಂದಲೂ ಬಿಜೆಪಿ ನಾಯಕರು ಟೀಕಿಸುತ್ತಲೇ ಬಂದಿದ್ದಾರೆ. ಹಾದಿ ಬೀದಿಯಲ್ಲಿ ಈ ಯೋಜನೆ ವಿರುದ್ಧ ಹೋರಾಟ ಮಾಡಿರುವುದು ನೆನಪಿದೆ. ಈಗ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಕೋಟ್ಯಂತರ ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಈಗ ಇದ್ದಕ್ಕಿದಂತೆ ಬಿಜೆಪಿ ನಾಯಕರಿಗೆ ಗೃಹಲಕ್ಷ್ಮೀ ಯೋಜನೆ ಬಗ್ಗೆ ಕಾಳಜಿ ಆರಂಭವಾಗಿದೆ ಎಂದು ವ್ಯಂಗ್ಯವಾಡಿದರು.
ಕೇವಲ ಎರಡು ತಿಂಗಳ ಗೃಹಲಕ್ಷ್ಮೀ ಹಣ ಮಾತ್ರ ಬಿಡುಗಡೆ ಆಗಿಲ್ಲ. ಈ ಹಣವನ್ನೂ ಫಲಾನುಭವಿಗಳ ಖಾತಗೆ ಜಮಾ ಮಾಡುವ ಕೆಲಸ ಮಾಡುತ್ತೇವೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ಗೊಂದಲವೂ ಇಲ್ಲ. ಅನಗತ್ಯವಾಗಿ ಬಿಜೆಪಿಯವರು ಗೃಹಲಕ್ಷ್ಮೀ ಯೋಜನೆ ಯಶಸ್ಸಿಗೆ ಮಸಿಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಕಂತುಗಳ ಲೆಕ್ಕದಲ್ಲಿ ನಾನು ಸದನಕ್ಕೆ ಮಾಹಿತಿ ನೀಡಿದ್ದೆ. ಆದರೆ, ಫೆಬ್ರವರಿ, ಮಾರ್ಚ್ ತಿಂಗಳ ಹಣ ಸಂದಾಯ ಆಗಿಲ್ಲ ಎಂದು ವಿರೋಧ ಪಕ್ಷದವರು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿದ್ದೇನೆ. ಜಮಾ ಆಗಿಲ್ಲದಿದ್ದರೆ ಹಣವನ್ನು ಬಿಡುಗಡೆ ಮಾಡುವುದಾಗಿ ಹಾಕುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ಗೃಹಲಕ್ಷ್ಮೀ ಯೋಜನೆ ಹಣವನ್ನು ಬೇರೆಲ್ಲಿಗೂ ವರ್ಗಾಯಿಸಿಲ್ಲ ಅಥವಾ ದುರುಪಯೋಗವಾಗಿಲ್ಲ. ಎರಡು ತಿಂಗಳ ಹಣ ಪಾವತಿಯಲ್ಲಿ ವ್ಯತ್ಯಯವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಅವರು ತಿಳಿಸಿದರು.

