ಬೆಳಗಾವಿ:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ಜಾರಿ ನಿರ್ದೆಶನಾಲಯ (ED) ಸಲ್ಲಿಸಿದ ಆರೋಪ ಪಟ್ಟಿಯನ್ನು ದೆಹಲಿ ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ (ಟ್ರಯಲ್ ಕೋರ್ಟ್) ತೀರ್ಮಾನವನ್ನು ಬೆಂಬಲಿಸಿ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಈ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಬಹುತೇಕ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು.
ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಹಾಳುಗೆಡವುತ್ತಿರುವುದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅತ್ತ ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಮುಖಂಡರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

