ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಕೊಡಿಸಿ: ಬಿಜೆಪಿ ಮುಖಂಡರಿಗೆ ಡಿಸಿಎಂ ಶಿವಕುಮಾರ್‌ ಸವಾಲು

Most read

ಬೆಳಗಾವಿ: ಉತ್ತರ ಕರ್ನಾಟಕ ಸಮಸ್ಯೆಗಳನ್ನು ಕುರಿತು ಚರ್ಚಿಸಲೆಂದೇ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ. ಆದರೆ ಬಿಜೆಪಿ ಮುಖಂಡರು ಇದೇ ಭಾಗದ ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗಳನ್ನು ಕುರಿತು ಏಕೆ ಮಾತನಾಡುತ್ತಿಲ್ಲ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ ಘೋಷಿಸಿದ ಅನುದಾನವನ್ನು ಇದುವರೆಗೂ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಬಿಡುಗಡೆ ಮಾಡಿಲ್ಲ. ಮಹದಾಯಿ ಯೋಜನೆಗೆ ಅನುಮತಿ ನೀಡಿಲ್ಲ. ಇಂತಹ ವಿಷಯಗಳನ್ನು ಕುರಿತು ರಾಜ್ಯ ಬಿಜೆಪಿ ಮುಖಂಡರು ಏಕೆ ಮಾತನಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

 ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ನಮ್ಮ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸುವಂತೆಯೇ ಇಲ್ಲ ಎಂದು ಅವರು, ಕೇಂದ್ರ ಸರ್ಕಾರ ಜಿಎಸ್ ಟಿ ಪರಿಷ್ಕರಣೆ ಮಾಡಿದ್ದರಿಂದ ರಾಜ್ಯದ ಆದಾಯ ಸಂಗ್ರಹಕ್ಕೆ ಕೊರತೆ ಉಂಟಾಗಿದೆ. ವಾರ್ಷಿಕ 10-15 ಸಾವಿರ ಕೋಟಿ ಕೊರತೆಯಾಗಿದೆ. ಈ ನಷ್ಟವನ್ನು ತುಂಬಿ ಕೊಡುವವರು ಯಾರು ಎಂದು ಕೇಳಿದರು.

ಆದರೂ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಒಂದೆರಡು ತಿಂಗಳು ಏರುಪೇರು ಉಂಟಾಗಬಹುದು. ನಮ್ಮನ್ನು ಟೀಕಿಸುವ ಬದಲು ತಾವು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ ಎಂದು ಡಿಕೆ ಶಿವಕುಮಾರ್‌ ತಿರುಗೇಟು ನೀಡಿದರು.

ದ್ವೇಷ ಭಾಷಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ನಾಗರಿಕ ಸಮಾಜ. ಇಲ್ಲಿ ದ್ವೇಷಕ್ಕೆ ಅವಕಾಶ ಇರಬಾರದು.  ದ್ವೇಷದ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಬಾರದು ಎಂಬ ದೃಷ್ಟಿಯಿಂದ ಕಾನೂನು ತರಲಾಗುತ್ತಿದೆ. ಇದರಿಂದ ರಾಜ್ಯ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿದೆ ಎಂದು ಸಮರ್ಥಿಸಿಕೊಂಡರು.

ಭಾನುವಾರ ದೆಹಲಿಯಲ್ಲಿ ಮತ ಕಳವು ಕುರಿತು ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ. ಪ್ರಜಾಪ್ರಭುತ್ವ ಉಳಿಯಬೇಕು, ಮತಕಳ್ಳತನದಿಂದ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ದೇಶದ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೂ ಕೂಡಾ ನಮಗೆ ಸಿಕ್ಕ ಗೆಲುವು ಎಂದು ಹೇಳಿದರು.

More articles

Latest article