ಬೆಳಗಾವಿ: ರಾಜ್ಯದ ನೇಕಾರರಿಗೆ 2023ರ ಏಪ್ರಿಲ್ ನಿಂದಲೇ ಅನ್ವಯವಾಗುವಂತೆ ಉಚಿತ ವಿದ್ಯುತ್ ಪೂರೈಸುವ ಬೇಡಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜವಳಿ, ಕಬ್ಬು ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದ್ದಾರೆ.
ಪ್ರಶೋತ್ತರ ವೇಳೆಯಲ್ಲಿ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ 10 ಹೆಚ್ ಪಿವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ಪೂರೈಕೆ ಭರವಸೆ ನೀಡಿದ್ದು, 2023ರ ನವೆಂಬರ್ನಿಂದ ಇದನ್ನು ಜಾರಿ ಮಾಡಲಾಗಿತ್ತು. ಈ ಉಚಿತ ವಿದ್ಯುತ್ ಪೂರೈಕೆಗೆ ವಾರ್ಷಿಕ 120-130 ಕೋಟಿ ರೂ. ವೆಚ್ಚವನ್ನು ಸರ್ಕಾರ ಭರಿಸುತ್ತಿದೆ ಎಂದು ಹೇಳಿದರು.
ಸರ್ಕಾರಿ ಆದೇಶ ಹೊರಬಿದ್ದನಂತರ ಉಚಿತ ವಿದ್ಯುತ್ ಪೂರೈಕೆ ಅನ್ವಯವಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಏಪ್ರಿಲ್ ನಿಂದಲೇ ಜಾರಿ ಮಾಡಿ ಎಂಬ ಬೇಡಿಕೆ ಇದೆ. ಈ ಬೇಡಿಕೆಗೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಂತರ ಇದನ್ನು ಪರಿಗಣಿಸಲಾಗುವುದು. 10 ಅಶ್ವಶಕ್ತಿವರೆಗಿನ ವಿದ್ಯುತ್ ಪ್ರತಿ ಯೂನಿಟ್ಗೆ 1.25 ರೂ. ವಿದ್ಯುತ್ ರಿಯಾಯ್ತಿಯನ್ನು ಘೋಷಣೆ ಮಾಡಲಾಗಿದೆ ಎಂದೂ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

