Friday, December 12, 2025

ಡ್ರಗ್ಸ್‌ ವ್ಯಾಪಾರಿಗಳು ವಾಸಿಸುವ ಮನೆಗಳ ಧ್ವಂಸ; ಸಚಿವ ಪರಮೇಶ್ವರ್‌; ಮನೆ ಮಾಲೀಕರಿಗೆ ಎಚ್ಚರಿಕೆಯ ಸಂದೇಶ

Most read

ಬೆಳಗಾವಿ: ರಾಜ್ಯಾದ್ಯಂತ ಮಾದಕವಸ್ತು ಮಾರಾಟವನ್ನು ತಡೆಯುವ ಕಾರ್ಯತಂತ್ರದ ಭಾಗವಾಗಿ ಡ್ರಗ್ಸ್‌ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಪ್ರಜೆಗಳು ವಾಸಿಸುವ ಮನೆಗಳನ್ನು ಧ್ವಂಸಗೊಳಿಸುವುದೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ  ವಿಧಾನಪರಿಷತ್‌ ಗೆ ತಿಳಿಸಿದ್ದಾರೆ.

ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ಕುರಿತು ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡ್ರಗ್ಸ್‌ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದರು.

ಆಫ್ರಿಕಾ ದೇಶಗಳಿಂದ ಅನೇಕ ವಿದೇಶಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್  ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪ್ರಕರಣ ದಾಖಲಾದ ನಂತರ ನಾವು ಅವರನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರು ಪ್ರಕರಣ ದಾಖಲಿಸಲೆಂದೇ ಬಯಸುತ್ತಾರೆ. ಆದರೂ  ಸುಮಾರು 300 ಮಂದಿಯನ್ನು ಗಡೀಪಾರು ಮಾಡಲಾಗಿದೆ ಎಂದು ಅವರು ಹೇಳಿದರು.

ಇಂತಹ ಅಪರಾಧಿಗಳಿಗೆ  ಮನೆಗಳನ್ನು ಬಾಡಿಗೆಗೆ ನೀಡುವ ಸ್ಥಳೀಯ ಆಸ್ತಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅವರು ವಾಸಿಸುವ ಬಾಡಿಗೆ ಕಟ್ಟಡವನ್ನು ಕೆಡವುವ ಹಂತಕ್ಕೆ ಸರ್ಕಾರ ಹೋಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ರಾಜ್ಯವನ್ನು ಡ್ರಗ್ಸ್‌  ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.

ವಿಶೇಷವಾಗಿ ಯುವಕರಲ್ಲಿ ಡ್ರಗ್ಸ್‌  ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ  ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ನಿನ್ನೆ ಒಂದೇ ದಿನದಲ್ಲಿ ಗೃಹ ಇಲಾಖೆ  ಅಧಿಕಾರಿಗಳು ಬೆಂಗಳೂರಿನ 1,000 ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

More articles

Latest article