Friday, December 12, 2025

ಮುಂಗಾರು; 14.21 ಲಕ್ಷ ರೈತರಿಗೆ ರೂ.2,249 ಕೋಟಿ ಪರಿಹಾರ ಜಮೆ; ಸಚಿವ ಕೃಷ್ಣಭೈರೇಗೌಡ

Most read

ಬೆಳಗಾವಿ: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯದ 14.21 ಲಕ್ಷ ರೈತರಿಗೆ ರೂ.2,249 ಕೋಟಿ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನ ಪರಿಷತ್ತಿನಲ್ಲಿ ಇಂದು ತಿಳಿಸಿದ್ದಾರೆ.

ಶೂನ್ಯವೇಳೆಯಲ್ಲಿ ತಿಮ್ಮಪ್ಪಣ್ಣ ಕಮಕನೂರ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿದರು.

ರಾಜ್ಯಾದ್ಯಂತ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 14.21 ಲಕ್ಷ ರೈತರಿಗೆ ಎಸ್‌ ಡಿ ಆರ್‌ ಎಫ್‌  ನಿಯಮಗಳ ಪ್ರಕಾರ ರೂ.1,218 ಕೋಟಿ ಮತ್ತು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನೀಡಿರುವ ರೂ.1,033 ಕೋಟಿ ಸೇರಿ ಒಟ್ಟಾರೆಯಾಗಿ ರೂ. 2249 ಕೋಟಿ ಹಣವನ್ನು ಪರಿಹಾರದ ರೂಪದಲ್ಲಿ 14.21 ಲಕ್ಷ ರೈತರಿಗೆ ನೀಡಲಾಗಿದೆ ಎಂದರು.

ಇದಲ್ಲದೆ ಜಾನುವಾರಗಳ ಹಾನಿಗೆ ರೂ.1.89 ಕೋಟಿ, ಮನೆಹಾನಿಗೆ ರೂ. 40.86 ಕೋಟಿ, ಅಲ್ಪ ಪ್ರಮಾಣದ ಮನೆಹಾನಿಗಳಿಗೆ ರೂ.5.79 ಕೋಟಿ, ಕಾಳಜಿ ಕೇಂದ್ರಗಳಿಗೆ ರೂ.1.20 ಕೋಟಿ ರೂ ಹಾಗೂ ಮಳೆಯಿಂದ ಉಂಟಾದ ಎಲ್ಲಾ ಪ್ರಾಣಹಾನಿಗಳನ್ನೂ ಸೇರಿಸಿದರೆ ಒಟ್ಟಾರೆಯಾಗಿ ರೂ.2,300 ಕೋಟಿ ಹಣವನ್ನು ಪರಿಹಾರವಾಗಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯಾದ್ಯಂತ  ಎಲ್ಲ ರೈತರಿಗೂ ಪರಿಹಾರ ಸಿಕ್ಕಿಲ್ಲ ಎನ್ನುವುದನ್ನು ಒಪ್ಪಿಕೊಂಡ ಸಚಿವರು ಕೆಲವು ರೈತರ ಆಧಾರ್ ಹೆಸರು ಮತ್ತು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿನ ಹೆಸರು ಹೊಂದಾಣಿಕೆಯಾಗುತ್ತಿಲ್ಲ.ಇನ್ನೂ ಕೆಲವರು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಲ್ಲ. ಇದಲ್ಲದೆ, ಸರ್ಕಾರ ಎನ್‌ ಪಿಸಿಐ  ಸೀಡಿಂಗ್ ಮಾಡಿದ್ದರಿಂದಲೂ ರೈತರಿಗೆ ಹಣ ಪಾವತಿಯಾಗಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಒಟ್ಟು 14,21,000 ರೈತರ ಪೈಕಿ 44,208 ರೈತರದ್ದು ಬಾಕಿ ಉಳಿದುಕೊಂಡಿದೆ. ರೈತರ ಈ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದ ಕೂಡಲೇ ಹಣ ಜಮೆ ಆಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾರು ಹಂಗಾಮಿನಲ್ಲಿ 3,23,219 ಎಕರೆ ಪ್ರದೇಶದಲ್ಲಿ ಬೆಳೆಹಾನಿ ಉಂಟಾಗಿದೆ. ಎಸ್‌ ಡಿ ಆರ್‌ ಎಫ್‌  ನಿಯಮಾವಳಿಗಳ ಪ್ರಕಾರ ಬೆಳೆಹಾನಿಗೆ ರೂ.257.90 ಕೋಟಿ ಪರಿಹಾರ ನೀಡಲಾಗಿದೆ.ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ರೂ. 245.75 ಕೋಟಿ ಪರಿಹಾರ ನೀಡಿದ್ದು, ಒಟ್ಟು ರೂ.498.73 ಕೋಟಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ವಿವರಿಸಿದರು.

More articles

Latest article