ಬೆಂಗಳೂರು: ಮೇಕೆದಾಟು ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್ (ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ) ನಿರ್ದೇಶಕರ ನೇತೃತ್ವದಲ್ಲಿ ರಾಜ್ಯ ಸರ್ಕಾರ ತಂಡವನ್ನು ರಚಿಸಿದ್ದು, ಈ ತಂಡವು ರಾಮನಗರದಲ್ಲಿ ಕಚೇರಿಯನ್ನು ಸ್ಥಾಪಿಸಿ ಕಾರ್ಯನಿರ್ವಹಿಸಲಿದೆ.
ಕರ್ನಾಟಕದ ಪರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಮೇಕೆದಾಟು ಯೋಜನೆ ಕಚೇರಿಯ ಕಟ್ಟಡದ ವ್ಯವಸ್ಥೆಗೆ ಕಾವೇರಿ ನೀರಾವರಿ ನಿಗಮ ನಿಯಮಿತ (ಕೆಎನ್ಎನ್ಎಲ್) ಕ್ರಮ ಕೈಗೊಳ್ಳಲಿದೆ. ಈ ತಂಡವು ಕೆಎನ್ಎನ್ಎಲ್ ನ ವ್ಯವಸ್ಥಾಪನ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದು, ಕಚೇರಿಯ ನಿರ್ವಹಣೆ, ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚವನ್ನು ಕೆಎನ್ಎನ್ಎಲ್ ಅನುದಾನದಿಂದ ಭರಿಸಲಾಗುವುದು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಕಡತ, ಪತ್ರ ವ್ಯವಹಾರ, ಹಾಗೂ ಇನ್ನಿತರೆ ದಾಖಲೆಗಳನ್ನು ಕೆಇಆರ್ ಎಸ್ ನಿರ್ದೇಶಕರಿಗೆ ಹಸ್ತಾಂತರಿಸುವಂತೆ ಕೆಎನ್ಎನ್ಎಲ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ತಂಡವು ಉಪ ಮುಖ್ಯ ಇಂಜಿನಿಯರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡಿದೆ. ನವಂಬರ್ 18 ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಒಂದು ಮುಖ್ಯ ಇಂಜಿನಿಯರ್ ಕಚೇರಿ ಹಾಗೂ ಒಂದು ಅಧೀಕ್ಷಕ ಇಂಜಿನಿಯರ್ ಕಚೇರಿಯನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಹೊಸದಾಗಿ ಕಚೇರಿ ಸ್ಥಾಪನೆ ಹಾಗೂ ಹುದ್ದೆಗಳ ನೇಮಕಕ್ಕೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ ಮತ್ತು ಈ ಪ್ರಕ್ರಿಯೆಗೆ ಹೆಚ್ಚಿನ ಸಮಯಾವಕಾಶ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಜವಾಬ್ದಾರಿಯನ್ನು ಕೆಇಆರ್ ಎಸ್ ಗೆ ವಹಿಸಿದೆ.

