ಬೆಂಗಳೂರು: ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ಋತುಚಕ್ರ ರಜೆ ಘೋಷಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಎಂ. ಅವರು ಸರ್ಕಾರದ ಆದೇಶಕೆ ತಡೆ ನೀಡಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿದೆ. ಚಳಿಗಾಲದ ರಜೆ ಮುಗಿದ ಬಳಿಕ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ಇದೆ ಎಂದೂ ಸ್ಪಷ್ಟಪಡಿಸಿದೆ.
ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದರು. ಸರ್ಕಾರವು ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ವಿವಿಧ ಸಂಸ್ಥೆಗಳಿಗೆ ಅಧಿಸೂಚನೆಯ ಮೂಲಕ ಹೆಚ್ಚುವರಿ ರಜೆಯನ್ನು ಪರಿಚಯಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ವಾದಿಸಿದರು. ಋತುಚಕ್ರ ರಜೆ ನೀತಿ- 2025 ಮೂಲಕ ಹೆಚ್ಚುವರಿ ರಜೆಯನ್ನು ಪರಿಚಯಿಸುವ ಮೊದಲು ಸರ್ಕಾರವು ಅರ್ಜಿದಾರರೊಂದಿಗೆ ಅಥವಾ ಅಂತಹ ಯಾವುದೇ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದೂ ಆಕ್ಷೇಪ ವ್ಯಕ್ತಪಡಿಸಿದರು.
2025ರ ನ.20ರಂದು ಸರ್ಕಾರಿ, ಅನುದಾನಿತ, ಖಾಸಗಿ ಎಲ್ಲಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಋತುಚಕ್ರ ರಜೆ ನೀಡಬೇಕು. ತಿಂಗಳಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ಹೆಚ್ಚುವರಿ ರಜೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿತ್ತು.

