ಧರ್ಮಸ್ಥಳ ಪ್ರಕರಣ: ಸಾಕ್ಷಿದೂರುದಾರ ಚಿನ್ನಯ್ಯ ದೂರಿಗೆ ಸಂಬಂಧಪಟ್ಟಂತೆ ಹೊಸ ಚಾರ್ಜ್‌ ಶೀಟ್‌ ಸಲ್ಲಿಕೆ ಇಲ್ಲ: ಗೃಹ ಇಲಾಖೆ ಸ್ಪಷ್ಟನೆ

Most read

ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ) ಸಾಕ್ಷಿದೂರುದಾರ ಚಿನ್ನಯ್ಯ ಸಲ್ಲಿಸಿದ್ದ ದೂರಿಗೆ ಸಂಬಂಧಪಟ್ಟಂತೆ ಯಾವುದೇ ಚಾರ್ಜ್‌ ಶೀಟ್‌ ಸಲ್ಲಿಸಿಲ್ಲ. ಎಸ್‌ ಐಟಿಯು ಹೊಸ  ಚಾರ್ಜ್‌ ಶೀಟ್‌ ಸಲ್ಲಿಸುತ್ತದೆ ಎನ್ನುವುದೂ ಸಹ ಕೇವಲ ವದಂತಿ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ. ಬಿ ಎನ್‌ ಎಸ್‌ ಎಸ್‌ ಕಾಯಿದೆಯ ಸೆ. 215 ರ ಅಡಿಯಲ್ಲಿ ಎಸ್‌ ಐಟಿಯು ಈಗಾಗಲೇ ನವಂಬರ್‌  20 ರಂದು ತನಿಖಾ ವರದಿಯನ್ನು ಸಲ್ಲಿಸಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸುದ್ದಿಗೋಷ್ಠಿ ನಡೆಸಿದ ನಂತರ ಚಾರ್ಜ್‌ ಶೀಟ್‌ ಸಲ್ಲಿಸಲಾಗುತ್ತದೆ ಎಂಬ ಊಹಾಪೋಹ ಕೇಳಿ ಬಂದಿತ್ತು. ಬಹುಶಃ ಆ ಸುದ್ದಿಗೋಷ್ಠಿಯಲ್ಲಿ ಎಸ್‌ ಐಟಿ ಮುಖ್ಯಸ್ಥ ಡಿಜಿಪಿ ಪ್ರಣಬ್‌ ಮೊಹಂತಿ ಅವರೂ ಉಪಸ್ಥಿತರಿದ್ದ ಕಾರಣ ಇಂತಹ ವದಂತಿ ಹಬ್ಬಿರಬಹುದು ಎನ್ನಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ವರದಿಗಾರರು ತನಿಖಾ ವರದಿಯನ್ನೇ ಚಾರ್ಜ್‌ ಶೀಟ್‌ ಎಂದು ಭಾವಿಸಿದ್ದರು. ಆಗ ಮೊಹಂತಿ ಅವರು, ಚಾರ್ಜ್‌ ಶೀಟ್‌ ಇಲ್ಲವೇ ಇಲ್ಲ! ಎಸ್‌ ಐಟಿ ಚಾರ್ಜ್‌ ಶೀಟ್‌ ಸಲ್ಲಿಸಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಹೊಸ ಚಾರ್ಜ್‌ ಶೀಟ್‌ ಸಲ್ಲಿಸಲಾಗುತ್ತದೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು.

ಸುಳ್ಳು ಪ್ರಕರಣಗಳನ್ನು ಕುರಿತು ಎಸ್ ಐಟಿಯು ತನಿಖಾ ವರದಿಯನ್ನು ಸಲ್ಲಿಸಿದೆ. ಇದನ್ನು ಇಂಗ್ಲೀಷ್‌ ನಲ್ಲಿ complaint report ಎಂದು ಕರೆಯಲಾಗುತ್ತದೆ. ಚಾರ್ಜ್‌ ಶೀಟ್‌ ಅಲ್ಲವೇ ಅಲ್ಲ. ಈ ವರದಿಯನ್ನು ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದು  ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುತ್ತದೆ. ಈಗಾಗಲೇ ವರದಿಯಾಗಿರುವಂತೆ ಈ ತನಿಖಾ ವರದಿಯಲ್ಲಿ ಚಿನ್ನಯ್ಯ, ಗಿರೀಶ್‌ ಮಟ್ಟಣ್ಣವರ್‌, ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಜಯಂತ್‌ ಟಿ, ವಿಠಲ್‌ ಗೌಡ ಮತ್ತು ಸುಜಾತಾ ಭಟ್‌ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ಮೂಲಗಳ ಪ್ರಕಾರ ಎಸ್‌ ಐಟಿಯು ಚಿನ್ನಯ್ಯ ಕುರಿತಾದ ತನಿಖೆಯನ್ನು ಪೂರ್ಣಗೊಳಿಸಿದೆ. ದೂರುದಾರನಾಗದ್ದ ಚಿನ್ನಯ್ಯ ಕಾಲಕ್ರಮೇಣ ಆರೋಪಿಯಾಗಿದ್ದ. ಇನ್ನು ಮುಂದೆ ಎಸ್‌ ಐಟಿಯು ಚಿನ್ನಯ್ಯ ಕುರಿತು ತನಿಖೆ ನಡೆಸುವುದಿಲ್ಲ ಎಂದೂ ತಿಳಿದು ಬಂದಿದೆ. ಸಧ್ಯ ಎಸ್‌ ಐಟಿಯು ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ತಲೆ ಬರುಡೆಗಳು, ಅನುಮಾನಾಸ್ಪದ ಸಾವುಗಳ ವರದಿಗಳು ಮತ್ತು ನಾಪತ್ತೆಯಾದವರ ಪ್ರಕರಣಗಳನ್ನು ಕುರಿತು ತನಿಖೆ ಮುಂದುವರೆಸಿದೆ. ಚಿನ್ನಯ್ಯ ದೂರಿನ ವ್ಯಾಪ್ತಿಗೆ ಈ ತನಿಖಾ ಅಂಶಗಳು ಒಳಪಡುವುದಿಲ್ಲ ಎನ್ನುವುದು ಮುಖ್ಯವಾಗುತ್ತದೆ.

More articles

Latest article