ಬೆಳಗಾವಿ ಅಧಿವೇಶನಕ್ಕೂ ಮುನ್ನ ಕನ್ನಡ ಚಳವಳಿಗಾರರ ಮೇಲಿರುವ ಮೊಕದ್ದಮೆಗಳನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ: ಕರವೇ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ

Most read

ಬೆಂಗಳೂರು: ಕನ್ನಡ ಚಳವಳಿಗಾರರ ಮೇಲಿರುವ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಿದ್ದರು. ಒಂದು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಂಡುಬರುತ್ತಿಲ್ಲ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳದಿದ್ದರೆ ಅಧಿವೇಶನಕ್ಕೆ ಮುತ್ತಿಗೆ, ಸಚಿವ-ಶಾಸಕರ ನಿವಾಸಗಳ ಮುಂದೆ ಪ್ರತಿಭಟನೆ, ಘೇರಾವ್, ಕಪ್ಪು ಬಟ್ಟೆ ಪ್ರದರ್ಶನದಂತಹ ತೀವ್ರ ಚಳವಳಿಗಳನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಸರ್ಕಾರ ಕೂಡಲೇ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಆಗ್ರಹಪಡಿಸಿದ್ದಾರೆ.

ಒಂದು ತಿಂಗಳು ಕಳೆದರೂ ಆ ದಿಶೆಯಲ್ಲಿ ಯಾವುದೇ ಸೂಚನೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ಘೋಷಣೆ ಕೇವಲ ಘೋಷಣೆಯಾಗಿ ಉಳಿದುಬಿಡುವ ಲಕ್ಷಣ ಕಂಡುಬರುತ್ತಿದೆ. ಕರ್ನಾಟಕ ಸರ್ಕಾರದ ಕೆಲವು ಸಚಿವರಿಗೆ ಕನ್ನಡ ಹೋರಾಟಗಾರರ ಮೊಕದ್ದಮೆಗಳನ್ನು ಹಿಂಪಡೆಯುವಲ್ಲಿ ಆಸಕ್ತಿ ಇಲ್ಲವೆಂಬಂತೆ ತೋರುತ್ತಿದೆ ಎಂದು ಆಪಾದಿಸಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳೂ ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಎದುರಿಸುತ್ತಿರುವ ಮೊಕದ್ದಮೆಗಳನ್ನು ಹಿಂಪಡೆಯುತ್ತವೆ. ತಮ್ಮ ಪರಿವಾರದ ಮುಖಂಡರ ಮೇಲಿರುವ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನೂ ಹಿಂಪಡೆಯಲಾಗುತ್ತದೆ. ಆದರೆ ಈ ನಾಡು-ನುಡಿಗಾಗಿ ಹೋರಾಡುವ ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಲು ಯಾರಿಗೂ ಮನಸ್ಸಾಗುವುದಿಲ್ಲ. ಕನ್ನಡ ಚಳವಳಿ ಮತ್ತು ಕನ್ನಡ ಚಳವಳಿಗಾರರ ಬಗ್ಗೆ ಇವರಿಗಿರುವ ತಿರಸ್ಕಾರ ಮತ್ತು ತಾತ್ಸಾರ ಮನೋಭಾವ ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಘೋಷಿಸಿದರೂ ರಾಜ್ಯ ಸರ್ಕಾರದ ಸಚಿವ ಸಂಪುಟ ಇನ್ನೂ ಈ ಕುರಿತು ನಿರ್ಧಾರ ತೆಗೆದುಕೊಂಡಿಲ್ಲವೇಕೆ? ಇದರ ಹಿಂದಿನ ಷಡ್ಯಂತ್ರ ಏನು? ಯಾವ ಶಕ್ತಿಗಳು ಸರ್ಕಾರವನ್ನು ತಡೆಯುತ್ತಿವೆ? ಇದೆಲ್ಲವೂ ನಮಗೆ ತಿಳಿಯದ ವಿಷಯವಲ್ಲ. ಈ ಶಕ್ತಿಗಳ ವಿರುದ್ಧ ತೀವ್ರ ಸ್ವರೂಪದ ಚಳವಳಿ ಸಂಘಟಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಮೂಲಮಂತ್ರಗಳನ್ನು ಧ್ಯೇಯವಾಗಿಟ್ಟುಕೊಂಡು ಬೀದಿಗಿಳಿದು ಹೋರಾಟ ಮಾಡಿದಾಗೆಲ್ಲ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ನಮಗೆ ನೀಡುವ “ಪ್ರಶಸ್ತಿ”ಯೇ ಮೊಕದ್ದಮೆಗಳು ಮತ್ತು ಜೈಲುವಾಸ. ನಮ್ಮ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಲ್ಲಸಲ್ಲದ ಸೆಕ್ಷನ್‌ ಗಳನ್ನು ಸೇರಿಸಿ ಕನ್ನಡ ಚಳವಳಿಗಾರರನ್ನು ಕ್ರಿಮಿನಲ್ಗಳಂತೆ ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯನವರು ರಾಜ್ಯೋತ್ಸವದ ದಿನ ನೀಡಿದ ವಾಗ್ದಾನವನ್ನು ಈಡೇರಿಸಬೇಕು. ಇದು ಅವರ ನೈತಿಕ ಜವಾಬ್ದಾರಿ. ಅಪಾರ ಕನ್ನಡ ಪ್ರೇಮಿಗಳಾದ ಅವರು ವಚನಭ್ರಷ್ಟರಾಗಬಾರದು. ಕನ್ನಡ ಚಳವಳಿಗಾರರ ವಿರುದ್ಧ ನಿಂತಿರುವ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಕೊಟ್ಟ ಮಾತನ್ನು ಈಡೇರಿಸಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸರಣಿ ಚಳವಳಿಗಳನ್ನು ಆಯೋಜಿಸುತ್ತಿದೆ. ದಿ. 05-12-2025 ಶುಕ್ರವಾರ ಬೆಳಗ್ಗೆ 10:30ಕ್ಕೆ ಹುಲಕೋಟಿಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ನಿವಾಸದ ಮುಂದೆ ಮಹಾಧರಣಿ ಹಾಗೂ ಮುತ್ತಿಗೆ ಹೋರಾಟ ನಡೆಯಲಿದೆ. ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧವಲ್ಲ; ಕನ್ನಡಪರ ಹೋರಾಟಗಾರರಿಗೆ ನ್ಯಾಯ ದೊರೆಯಬೇಕೆಂಬ ಏಕೈಕ ಉದ್ದೇಶದಿಂದ ನಡೆಯುತ್ತಿದೆ ಎಂದೂ ನಾರಾಯಣ ಗೌಡ ಸ್ಪಷ್ಟಪಡಿಸಿದ್ದಾರೆ.

More articles

Latest article