ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಖಗೋಳ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯಿರಿಸಿದೆ. ಪ್ರಸ್ತುತ ಕ್ರೈಸ್ ವಸತಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಿರುವ, ಟೆಲಿಸ್ಕೋಪ್ ವಿತರಣೆ ಯೋಜನೆಯನ್ನು ರಾಜ್ಯದ ಇನ್ನಷ್ಟು ಸರಕಾರಿ ಶಾಲೆಗಳಿಗೆ ವಿಸ್ತರಿಸುವ ಕುರಿತು ಚಿಂತನೆ ನಡೆಸಿದ್ದು, ಈ ಬಗ್ಗೆ ಮುಂದಿನ ಬಜೆಟ್ನಲ್ಲಿ ಅಗತ್ಯ ಅನುದಾನ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು ತಿಳಿಸಿದರು.
ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಕ್ರೈಸ್ (KRIES) ಶಾಲಾ ಶಿಕ್ಷಕರುಗಳಿಗೆ ಟೆಲಿಸ್ಕೋಪ್ ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಯೋಜನೆ ವಿಸ್ತರಣೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಈಗಾಗಲೇ ಅನುಷ್ಠಾನಗೊಳಿಸಿರುವ ಟೆಲಿಸ್ಕೋಪ್ ವಿತರಣೆ ಯೋಜನೆಯನ್ನು ಇನ್ನಷ್ಟು ಸರಕಾರಿ ಶಾಲೆಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಮುಂದಿನ ಆಯವ್ಯಯದಲ್ಲಿ ಹೆಚ್ಚುವರಿ ಅನುದಾನ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಬರುವ ಒಟ್ಟು 833 ವಸತಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ತಲಾ ಒಂದರಂತೆ, ಒಟ್ಟಾರೆ ₹3.00 ಕೋಟಿ ವೆಚ್ಚದಲ್ಲಿ ದೂರದರ್ಶಕಗಳನ್ನು (ಟೆಲಿಸ್ಕೋಪ್) ವಿತರಿಸಲಾಗಿದೆ. ದೇಶದ ಯಾವುದೇ ಸರ್ಕಾರಿ ಇಲಾಖೆ ಇಂತಹದ್ದೊಂದು ಸಾಧನೆಯನ್ನು ಮಾಡಿಲ್ಲ ಎಂದು ಸಚಿವರು ಹೆಮ್ಮೆಯಿಂದ ನುಡಿದರು.
ಇಂದಿನ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಯುವ ಪೀಳಿಗೆಗೆ ವೈಜ್ಞಾನಿಕ ಚಿಂತನೆ, ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು ಅತ್ಯಮೂಲ್ಯ ಕೊಡುಗೆಯಾಗಿದೆ. ವಿಜ್ಞಾನ ಶಿಕ್ಷಣವನ್ನು ಸದೃಢಗೊಳಿಸಲು ರಾಜ್ಯಾದ್ಯಂತ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ತರಬೇತಿ ಮತ್ತು ಕ್ಯಾಲೆಂಡರ್ ಅನಾವರಣ:
ಶಿಕ್ಷಕರಿಗೆ ತರಬೇತಿ: ಸಾಧನಗಳನ್ನು ವಿತರಿಸುವುದು ಮಾತ್ರವಲ್ಲ, ಅದನ್ನು ಸಮರ್ಥವಾಗಿ ಬಳಸುವಂತೆ ಮಾಡುವುದು ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ, ದೂರದರ್ಶಕಗಳ ಸಮರ್ಪಕ ನಿರ್ವಹಣೆ ಮತ್ತು ಬಳಕೆಯ ಕುರಿತು ಕ್ರೈಸ್ ಶಾಲಾ ಶಿಕ್ಷಕರಿಗೆ ಹಂತ ಹಂತವಾಗಿ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗಿದೆ. ಈ ಪ್ರಾಯೋಗಿಕ ತರಬೇತಿಯು ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ವಿಶೇಷ ಆಸಕ್ತಿಯನ್ನು ಮೂಡಿಸಲು ನೆರವಾಗಲಿದೆ ಎಂದು ಭೋಸರಾಜು ಅವರು ಅಭಿಪ್ರಾಯಪಟ್ಟರು.
ಖಗೋಳ ಕ್ಯಾಲೆಂಡರ್ ಬಿಡುಗಡೆ: ಇದೇ ಸಂದರ್ಭದಲ್ಲಿ, ಇಲಾಖೆ ವತಿಯಿಂದ ಸಿದ್ಧಪಡಿಸಿದ 2026ನೇ ಸಾಲಿನ ಆಸ್ಟ್ರೋನಾಮಿಕಲ್ ಕ್ಯಾಲೆಂಡರ್ ಅನ್ನು ಸಚಿವರು ಅನಾವರಣಗೊಳಿಸಿದರು. ಈ ಕ್ಯಾಲೆಂಡರ್ ಅನ್ವಯ ಪ್ರತಿ ತಿಂಗಳು ಆಕಾಶದಲ್ಲಿ ನಡೆಯುವ ಖಗೋಳೀಯ ಘಟನೆಗಳನ್ನು ಟೆಲಿಸ್ಕೋಪ್ ಮುಖಾಂತರ ವಿದ್ಯಾರ್ಥಿಗಳಿಗೆ ವಿವರಿಸಲು ಶಿಕ್ಷಕರಿಗೆ ಇದು ಅತ್ಯಂತ ಸಹಾಯಕವಾಗಲಿದೆ ಎಂದು ತಿಳಿಸಿದರು.
ಶಿಕ್ಷಕರು ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವವರು. ಈ ಟೆಲಿಸ್ಕೋಪ್ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು, ನಿಮ್ಮ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿ,” ಎಂದು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಕರಿಗೆ ಸಚಿವರು ಕರೆ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಐಟಿ&ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎನ್ ಮಂಜುಳಾ, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು, ಜವಹಾರ್ಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಗುರುಪ್ರಸಾದ್ ಸೇರಿದಂತೆ ವಿವಿಧ ಕ್ರೈಸ್ ಶಾಲೆಗಳ 90 ಶಿಕ್ಷಕರು ಉಪಸ್ಥಿತರಿದ್ದರು.

