ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ತಮಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ಗೆ ನಿರಾಶೆ ಮೂಡಿದೆ.
ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿದ್ದರು.
ಮಧ್ಯಂತರ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ಜಾಮೀನು ನೀಡಲು ನಿರಾಕರಿಸಿದೆ. ಮೇಲ್ಮನವಿದಾರರು ಎಸಗಿರುವ ಕೃತ್ಯ, ಗಾಂಭೀರ್ಯ ಗಮನಿಸಿದರೆ ಇದು ಜಾಮೀನು ನೀಡಲು ಅರ್ಹ ಪ್ರಕರಣ ಅನ್ನಿಸುವುದಿಲ್ಲ. ಜಾಮೀನು ನೀಡಿದರೂ ಇತರ ಪ್ರಕರಣಗಳ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿಯ ವಿಚಾರಣೆ ನಡೆದಿದ್ದು ಹೈಕೋರ್ಟ್ ನಲ್ಲಿ ಮತ್ತೊಮ್ಮೆ ಸಾಕ್ಷಿಯನ್ನು ಕರೆಸಿ ವಿಚಾರಣೆ ನಡೆಸುವ ಅಗತ್ಯ ಇಲ್ಲ. ದೂರು ದಾಖಲಿಸುವಲ್ಲಿ ವಿಳಂಬ, ವಿಧಿ ವಿಜ್ಞಾನ ಪ್ರಯೋಗಾಲಯ ವರದಿ, ಅಶ್ಲೀಲ ವಿಡಿಯೋಗಳ ಜಪ್ತಿ, ತೋಟದ ಮಾಲೀಕತ್ವ, ಬೆಂಗಲೂರಿನ ಬಸವನಗುಡಿ ನಿವಾಸಕ್ಕೆ ಹೋಗಿಲ್ಲ ಎಂಬ ಸಣ್ಣ ಪುಟ್ಟ ಅಂಶಗಳನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದೂ ಪೀಠ ತಿಳಿಸಿದೆ.
ಪ್ರಜ್ವಲ್ ರೇವಣ್ಣ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ವಾದ ಮಂಡಿಸಿದ್ದರು. ಆಗಸ್ಟ್ 1ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಕಾರಾಗೃಹದ ಶಿಕ್ಷೆ ವಿಧಿಸಿತ್ತು.

