ಕಡಬದ ಸಂತ ಜೋಕಿಮ್ಸ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ; ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಕರೆ

Most read

ಕಡಬ: ಪ್ರಜಾಧ್ವನಿ ಕರ್ನಾಟಕ ಹಾಗೂ ಕಡಬದ ಸಂತ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಇದರ ಅಂಗವಾಗಿ ಪದವಿಪೂರ್ವ ವಿದ್ಯಾರ್ಥಿಗಳಿಗೆ “ಸಂವಿಧಾನದ ಆಶಯಗಳು, ಮೌಲ್ಯಗಳು, ಜಾಗೃತಿ ಮತ್ತು ಯುವಕರ ಪಾತ್ರ” ವಿಷಯದ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಸ್ತಾವಿಕ ಭಾಷಣ ಮಾಡಿದ ಪ್ರಜಾಧ್ವನಿ ಕರ್ನಾಟಕದ ಸಂಸ್ಥಾಪಕ ಸದಸ್ಯ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಜಾನಿ ಕೆ. ಪಿ. ಅವರು, ನಮ್ಮ ಮುಂದಿನ ತಲೆಮಾರುಗಳ ಕನಸಿನ ಭವಿಷ್ಯವನ್ನು ರೂಪಿಸಲು ಮತ್ತು ಭದ್ರಗೊಳಿಸಲು ಡಾ. ಅಂಬೇಡ್ಕರ್  ಅವರು ನೀಡಿದ ಸಂವಿಧಾನ ಒಂದು ಭದ್ರ ಅಡಿಪಾಯವಾಗಿದ್ದು, ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರಜಾಧ್ವನಿ ರಚನೆಯಾಗಿದೆ ಎಂದರು.

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಆ್ಯಂಟನಿ ಟಿ. ಪಿ. ಮಾತನಾಡಿ ಸಂವಿಧಾನದ ಮಹತ್ವ,, ಸಂವಿಧಾನಬದ್ಧ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಕುರಿತು ವಿವರಿಸಿದರು. ನಮ್ಮ ಹಕ್ಕುಗಳ ರಕ್ಷಣೆಯಾಗಬೇಕಾದರೆ ಸಂವಿಧಾನದಲ್ಲಿ ಅಡಕವಾಗಿರುವ ನಮ್ಮ ಕರ್ತವ್ಯಗಳು ಹಾಗೂ ಬಾಧ್ಯತೆಗಳನ್ನು ಪಾಲನೆ ಮಾಡಬೇಕಾದ ಅವಶ್ಯಕತೆ ಕುರಿತು ವಿವರಿಸಿದರು. 

“V for IAS Notes” ಅಪ್ಲಿಕೇಶನ್ ನ ಸಂಸ್ಥಾಪಕ ಹಾಗೂ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಮುಸ್ತಫಾ ಮಾತನಾಡಿ ಧಾರ್ಮಿಕ, ಭಾಷಾ, ಭೌಗೋಳಿಕ ವಿವಿಧತೆಗಳಿರುವ ಭಾರತದಲ್ಲಿ ಸರ್ವ ಜನಾಂಗದ ಜನರಿಗೆ ಒಂದಾಗಿ ಬಾಳಲು ಅವಕಾಶ ಕಲ್ಪಿಸಿಕೊಟ್ಟಂತಹ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನ. ಇಂತಹ ಸಂವಿಧಾನವನ್ನು ಉಳಿಸಬೇಕಾದ ಅನಿವಾರ್ಯತೆ ಹಾಗೂ ಅದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.  ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷರಾದ ಅಶೋಕ್ ಎಡಮಲೆ ಮಾತನಾಡಿ ಇಂದು ನಮ್ಮ ನಮ್ಮ ಮನೆಯಿಂದ ಹೊರಬಂದರೆ ನಮ್ಮ ಪ್ರತಿಯೊಂದು ಚಟುವಟಿಕೆಗಳಿಗೂ ಸಂವಿಧಾನ ಅನ್ವಯವಾಗುತ್ತದೆ.  ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡಲು ಕಾಲೇಜು ವಿದ್ಯಾರ್ಥಿಗಳು ಪ್ರಜಾಧ್ವನಿ ಸಂಘಟನೆಯ ಮೂಲಕ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ. ಪ್ರಕಾಶ್ ಪೌಲ್ ಡಿಸೋಜಾ ಮಾತನಾಡಿ ಸಮಾಜವು ಸಾಂವಿಧಾನಿಕ ಮಾರ್ಗವನ್ನು ಬಿಟ್ಟು ಹೋಗದಂತೆ ಸರಿದಾರಿಗೆ ತರಲು ಪ್ರಯತ್ನಿಸಲು ರೂಪುಗೊಂಡ ವೇದಿಕೆ ಪ್ರಜಾಧ್ವನಿ.  ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ನಮ್ಮೆಲ್ಲರ ಪ್ರಯತ್ನ ಇರಲಿ ಎಂದು ಹೇಳಿ ಸಂಘಟನೆಗೆ ಶುಭ ಹಾರೈಸಿದರು. ಜೋಮೋನ್ ಅಕಾಡೆಮಿಯ ಮುಖ್ಯಸ್ಥ ಜೋಮೋನ್ ಕಡಬ ಸಭೆಯಲ್ಲಿದ್ದವರಿಗೆ ಸಂವಿಧಾನ ಪೀಠಿಕೆಯ ಪ್ರಮಾಣ ಬೋಧಿಸಿದರು.

ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಪ್ರತಿನಿಧಿ ವಿದ್ಯಾರ್ಥಿನಿ ಕು. ಸಾನಿಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.  ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕಿರಣ ಕುಮಾರ, ಪ್ರಜಾಧ್ವನಿ ಕರ್ನಾಟಕದ ಉಪಾಧ್ಯಕ್ಷ ಪ್ರವೀಣ್ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಹಿರಿಯ ಸದಸ್ಯ ಮೊಹಮ್ಮದ್ ಕುಂಞಿ ಗೂನಡ್ಕ,  ಪದಾಧಿಕಾರಿಗಳಾದ ವಕೀಲ ಮೋಹನ್ ಕೆ. ಪಿ. ಕಡಬ, ಪಂಚಾಯತ್ ಸದಸ್ಯ ಕಾರ್ಮಿಕ ನಾಯಕ ಶಿವಶಂಕರ್, ಅಶ್ರಫ್ ಸಾಹುಕಾರ್, ಮಹೇಶ್ ಬೆಳ್ಳಾರಕರ್, ಭರತ್ ಕುಕ್ಕುಜಡ್ಕ, ಮಂಜುನಾಥ ಮಡ್ತಿಲ, ಪ್ರಮೀಳಾ ಪೆಲ್ತಡ್ಕ, ಫಿಲೋಮಿನಾ ಕ್ರಾಸ್ತಾ, ಮನೋಜ್ ಬಿಳಿಮಲೆ, ಸಾಮಾಜಿಕ ಕಾರ್ಯಕರ್ತೆ ರೆಬೆಕ್ಕಾ, ಮಾರ್ ಇವಾನಿಯೋಸ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಉಷಾ ಎಂ. ಎಲ್., ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

More articles

Latest article