ಬೆಂಗಳೂರು: ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸುವ ಮೂಲಕ ಬಿಜೆಪಿ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸದ್ದಾರೆ.
ಅವರು ಅವರು ಇಂದು ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಮತ್ತು ಇತರ ಮುಖಂಡರಿಗೆ ಕಿರುಕುಳ ನೀಡುತ್ತಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅವರ ಮೇಲೆ ಎಫ್ ಐಆರ್ ದಾಖಲಿಸಿರುವುದು ಅನ್ಯಾಯ. ಕಿರುಕುಳ ನೀಡುವುದಕ್ಕೂ ಒಂದು ಮಿತಿ ಇದೆ. ಈ ಪ್ರಕರಣದಲ್ಲಿ ಅವರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಆಸ್ತಿಯಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಕಾರಣಕ್ಕೆ ಅವರು ಈ ಸಂಸ್ಥೆಯ ಷೇರುಗಳ ಪಾಲಕರಾಗಿದ್ದರು ಎಂದು ಹೇಳೀದರು.
ನಾನು ಹಾಗೂ ಸಿಎಂ ಅವರೂ ಕೂಡ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದು, ನಬ್ಬಿಬ್ಬರ ಹೆಸರಿನಲ್ಲಿ ಕನಿಷ್ಠ 1-2 ಷೇರುಗಳು ಇರುತ್ತವೆ. ನಮ್ಮ ಅಧಿಕಾರ ಮುಗಿದ ನಂತರ ಈ ಷೇರುಗಳು ವರ್ಗಾವಣೆಯಾಗುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾರಣ ನಮ್ಮ ನಾಯಕರ ಹೆಸರಿನಲ್ಲೂ ಷೇರುಗಳು ಇರುತ್ತವೆ. ಈ ಪದ್ದತಿ ಜವಹಾರ್ ಲಾಲ್ ನೆಹರೂ ಅವರ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗಾಗಿ ಅವರು ಸಂಪ್ರದಾಯದಂತೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಜವಾಬ್ದಾರಿ ಹೊತ್ತಿರುತ್ತಾರೆ ಎಂದು ವಿವರಿಸಿದರು.
ಇದೀಗ ಅವರಿಗೆ ರಾಜಕೀಯವಾಗಿ ಕಿರುಕುಳ ನೀಡಲಾಲಾಗುತ್ತಿದೆ. ಇತಿಹಾಸ ಮರುಕಳಿಸಲಿದೆ. ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಿದರೂ ಅವರು ಯಾವುದಕ್ಕೂ ಬಗ್ಗುವುದಿಲ್ಲ. ಕೇಂದ್ರ ಸರ್ಕಾರದ ಈ ದ್ವೇಷ ರಾಜಕಾರಣ ಸರಿಯಲ್ಲ. ರಾಜಕೀಯವನ್ನು ನೇರವಾಗಿ ಮಾಡಬೇಕು. ಚುನಾವಣೆಯಲ್ಲಿ ಹೋರಾಟ ನಡೆಸೋಣ. ಆದರೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

