ನವದೆಹಲಿ: ಶುದ್ಧ ಗಾಳಿ ಮತ್ತು ಶುದ್ಧ ನೀರು ಎಲ್ಲ ನಾಗರಿಕರ ಮೂಲಭೂತ ಹಕ್ಕುಗಳಾಗಿವೆ. ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು, ಗಾಳಿ ಮತ್ತು ನೀರು ಶುದ್ಧೀಕರಣ ಯಂತ್ರಗಳ ಮೇಲೆ ವಿಧಿಸಲಾಗುತ್ತಿರುವ ಶೇ. 18ರಷ್ಟು ಜಿಎಸ್‌ಟಿಯನ್ನು ರದ್ದುಗೊಳಿಸಬೇಕು ಆಪ್ ಮುಖಂಡ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.
ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಾಲಿನ್ಯದಿಂದ ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಸಾರ್ವಜನಿಕರು ಗಾಳಿ ಮತ್ತು ನೀರು ಶುದ್ಧೀಕರಣ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಇದು ಹೊರೆಯಾಗಿ ಪರಿಣಮಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಜಿಎಸ್ ಟಿಯನ್ನು ರದ್ದುಗೊಳಿಸಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಶುದ್ಧ ಗಾಳಿ ಮತ್ತು ನೀರು ದೇಶದ ನಾಗರಿಕರ ಮೂಲಭೂತ ಹಕ್ಕುಗಳಾಗಿವೆ. ದೆಹಲಿ ಮತ್ತು ಉತ್ತರ ಭಾರತದ ಗಾಳಿಯ ಗುಣಮಟ್ಟ ಮಾರಣಾಂತಿಕವಾಗಿದೆ. ಈ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಬದಲಾಗಿ ಕೇಂದ್ರ ಸರ್ಕಾರ ಅಧಿಕ ತೆರಿಗೆ ಸಂಗ್ರಹಿಸುವುದರಲ್ಲಿ ನಿರತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

