ಬೆಂಗಳೂರು: ಸ್ನಾತಕೋತ್ತರ ಪದವಿ ಪಡೆದು ತಜ್ಞ ವೈದ್ಯರಾಗುತ್ತಿರುವವರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ವೃತ್ತಿಪರತೆ, ಬದ್ದತೆ ಜತೆಗೆ ನೈತಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಕಿವಿಮಾತು ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿಇಂದು ಆಯೋಜಿಸಲಾಗಿದ್ದ “ಸಂಕಲ್ಪ” ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ನೀಡಿದರು.
ವೈದ್ಯ ಪದವಿ ನಂತರ ಈಗ ಸ್ನಾತಕೋತ್ತರ ಶಿಕ್ಷಣವನ್ನೂ ಪೂರೈಸಿ ತಜ್ಞತೆ ಪಡೆದಿದ್ದೀರಿ. ನಿಮ್ಮ ಓದು, ಕಲಿಕೆ ಇಲ್ಲಿಗೆ ಮುಗಿಯುವುದಿಲ್ಲ. ಕಲಿಕೆ ಎನ್ನುವುದು, ಕೌಶಲ್ಯವನ್ನು ರೂಢಿಸಿಕೊಳ್ಳುವುದು ನಿರಂತರ ಪ್ರಕ್ರಿಯೆ. ಜ್ಞಾನವನ್ನು ಉನ್ನತೀಕರಿಸಿಕೊಳ್ಳುವುದರಿಂದ ನೀವು ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ರೂಪುಗೊಳ್ಳಬಹುದು. ಇದರಿಂದ ಸಮಾಜದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಲು ಸಹಕಾರಿಯಾಗಲಿದೆ ಎಂದು ಸಚಿವರು ಸಲಹೆ ನೀಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ. ತ್ವರಿತ ಬದಲಾವಣೆಯಿಂದಾಗಿ ವೃತ್ತಿಯಲ್ಲಿ ಜ್ಞಾನ ಉನ್ನತೀಕರಿಸಿಕೊಳ್ಳುವುದು ಅನಿವಾರ್ಯ. ಭಾರತ ಮಾತ್ರವಲ್ಲದೇ ಹೊರ ದೇಶದಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಏನೇನು ಆಗುತ್ತಿದೆ ಎನ್ನುವ ಜ್ಞಾನವನ್ನೂ ಗಳಿಸಿಕೊಳ್ಳಿ. ಇದರಿಂದ ಉನ್ನತ ಮಟ್ಟಕ್ಕೆ ನೀವು ಬೆಳೆಯಬಹುದು ಎಂದು ಡಾ. ಪಾಟೀಲ್ ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಇಲ್ಲಿ ಶಿಕ್ಷಣ ಪಡೆಯಲು ನಿಮಗೆ ಅವಕಾಶ ಸಿಕ್ಕಿದೆ. ಅದರಲ್ಲೂ ವೈದ್ಯಕೀಯ ಶಿಕ್ಷಣ ದುಬಾರಿಯಾಗಿರುವಾಗ ಸರ್ಕಾರ ನೀಡುವ ಅತ್ಯುತ್ತಮ ಸೌಲಭ್ಯಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿಯೇ ಶಿಕ್ಷಣ ಪಡೆದುಕೊಂಡಿದ್ದೀರಿ. ಕೈಗೆಟುಕುವ ದರದಲ್ಲಿಯೇ ಶಿಕ್ಷಣ ಪಡೆದಿರುವ ನೀವು ಉತ್ತಮ ಸೇವೆ ಮಾಡುವ ಮೂಲಕ ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಯುವ ವೈದ್ಯರಿಗೆ ಸಲಹೆ ನೀಡಿದರು.

