ಬೆಂಗಳೂರು: ಸ್ವಯಂ ಘೋಷಿತ “ವಿಶ್ವಗುರು”ವಿನ ಆಡಳಿತದಲ್ಲಿ ವಿಶ್ವದ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇರುವುದು ಪ್ರಧಾನಿ @narendramodi ಯ”ಅಚ್ಛೇ ದಿನ”ದ ಕರಾಳ ಮುಖಗಳ ಅನಾವರಣವೋ ಅಥವಾ ರೂಪಾಯಿ ಮೌಲ್ಯವನ್ನು ಶತಕದ ಗಡಿ ದಾಟಿಸಬೇಕೆಂದು ದಿನದ 18 ಗಂಟೆಗಳ ಕಾಲ ದುಡಿಯುತ್ತಿರುವುದರ ಸಾಧನೆಯೋ? ಎಂದು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪ್ರಧನಿ ಮೋದಿ ಅವರ ಕಳಪೆ ಸಾದನೆ ಕುರಿತು ವ್ಯಂಗ್ಯವಾಡಿದ್ದಾರೆ.
ಮೋದಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಡಾಲರ್ ಮುಂದೆ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದರೆ, ದೇಶದ ಆಡಳಿತ, ಆರ್ಥಿಕ ನೀತಿಗಳು ಹಳಿ ತಪ್ಪಿರುವುದರಿಂದ ಬೆಲೆ ಏರಿಕೆಯೂ ಮಿತಿ ಮೀರುತ್ತಿದೆ. ಪೆಟ್ರೋಲ್, ಡಿಸೆಲ್, ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದ್ದರೆ, ಜನ ಸಾಮಾನ್ಯರ ಬದುಕು ಮತ್ತಷ್ಟು ಹದಗೆಡುತ್ತಿದೆ.
ಯುಪಿಎ ಆಡಳಿತದಲ್ಲಿ ರೂಪಾಯಿ ಮೌಲ್ಯ 63.76 ಇದ್ದ ಕಾಲದಲ್ಲಿ 2013, ಆಗಸ್ಟ್ 24 ರಂದು ಗುಜರಾತಿನ ರಾಜ್ ಕೋಟ್ ನಲ್ಲಿ ನಿಂತು ನರೇಂದ್ರ ಮೋದಿ ಭಾಷಣ ಮಾಡಿರುವುದನ್ನು ಮರೆತಂತಿದೆ. “ರೂಪಾಯಿ ಮೌಲ್ಯ ಡೆತ್ ಬೆಡ್ ನಲ್ಲಿದೆ, ಯುಪಿಎ ಸರ್ಕಾರ ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದೆ, ಆರ್ಥಿಕತೆಯನ್ನು ಎದ್ದು ನಿಲ್ಲಿಸಬೇಕಿದೆ” ಎಂದು ಭಾಷಣ ಮಾಡಿದ ಪ್ರಧಾನಿ ಮೋದಿ, ಆರ್ಥಿಕತೆಯನ್ನು ಎದ್ದು ನಿಲ್ಲಿಸುವುದು ಬಿಡಿ, ಮಕಾಡೆ ಮಲಗಿಸಿದ್ದಾರೆ.
ರೂಪಾಯಿ ಮೌಲ್ಯವೂ 89ರ ಗಡಿ ದಾಟಿರುವುದಕ್ಕೆ ಪ್ರಧಾನಿ ಮೋದಿ ಸರ್ಕಾರದ ಆರ್ಥಿಕ ದಿವಾಳಿತನದ ನೀತಿಗಳೇ ಕಾರಣ. ರೂಪಾಯಿ ಮೌಲ್ಯದ ಕುಸಿತವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅಸ್ಮಿತೆಗೆ ಬಿದ್ದ ಭಾರಿ ಹೊಡೆತ. ಕೇಂದ್ರ ಸರ್ಕಾರದ ಇಂತಹ ಕೆಟ್ಟ ನೀತಿಗಳಿಂದ ಭಾರತದ ಭವಿಷ್ಯತ್ತಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ.

