ಚಿನ್ನಯ್ಯಗೆ ಜಾಮೀನು; ಆದರೆ ಮಾಧ್ಯಮಗಳ ಎದುರು ಮಾತಾಡುವಂತಿಲ್ಲ; ಕೋರ್ಟ್‌ ಷರತ್ತು

Most read

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯಗೆ ಮಂಗಳೂರು ಜಿಲ್ಲಾ ಸೆಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸುಳ್ಳು ಸಾಕ್ಷಿ ಹೇಳಿದ್ದಕ್ಕಾಗಿ ಚಿನ್ನಯ್ಯ ಆಗಸ್ಟ್ 23 ರಿಂದ ಶಿವಮೊಗ್ಗ ಜೈಲಿನಲ್ಲಿದ್ದಾನೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ತನ್ನ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಬೆನ್ನಲ್ಲೇ ಚಿನ್ನಯ್ಯ ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿ 1 ಲಕ್ಷ ರೂ. ಬಾಂಡ್ ಸೇರಿ 12 ಷರತ್ತು ವಿಧಿಸಿದೆ.

ಪ್ರಕರಣ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ನ್ಯಾಯಾಲಯ ಷರತ್ತು ವಿಧಿಸಿದೆ. ಸಾಮೂಹಿಕವಾಗಿ ಶವಗಳನ್ನು ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ. 20 ರಂದು ಎಸ್‌ ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ದೂರು ವರದಿ ಸಲ್ಲಿಸಿದ ಮೂರು ದಿನಗಳಲ್ಲಿ ಜಾಮೀನು ಮಂಜೂರಾಗಿದೆ. ಸಾರ್ವಜನಿಕವಾಗಿ ಮಾತನಾಡಬಾರದು ಮತ್ತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಎಂದೂ ನ್ಯಾಯಾಲಯ ಷರತ್ತು ವಿಧಿಸಿದ್ದು, ಒಂದು ವೇಳೆ ಮಾತನಾಡಿದರೆ ಜಾಮೀನು ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.  

ಜುಲೈ3ರಂದು ಚಿನ್ನಯ್ಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ಜುಲೈ 19 ರಂದು ಸರ್ಕಾರ ಎಸ್‌ ಐಟಿ ರಚಿಸಿತ್ತು. ಈ ತನಿಖಾ ಆಯೋಗವು ಚಿನ್ನಯ್ಯ ನೀಡಿದ ಮೂಲ ದೂರಿಗೆ ಮಾತ್ರ ಸೀಮಿತವಾಗಿಲ್ಲ. ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಿರುವ ಶವಗಳನ್ನು ಹೂತು ಹಾಕಿರುವ ಪ್ರಕರಣಗಳ ತನಿಖೆಯನ್ನೂ ಒಳಗೊಂಡಿದೆ. ಇತ್ತೀಚೆಗೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮೂಳೆ ಮತ್ತು ತಲೆಬುರುಡೆಗಳು ಪತ್ತೆಯಾಗಿವೆ. ಇವೆಲ್ಲವೂ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿವೆ.

ಡಿಜಿಪಿ ಪ್ರಣಬ್‌ ಮೊಹಂತಿ ನೇತೃತ್ವದ ಎಸ್‌ ಐಟಿಯು ಜುಲೈ 28ರಿಂದ ತನಿಖೆ ಆರಂಭಿಸಿದ್ದು, ನೇತ್ರಾವತಿ ಸ್ನಾನಘಟ್ಟದಲ್ಲಿ ಮ್ಯಾಜಿಸ್ಟ್ರೇಟ್‌ ಮತ್ತು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಉತ್ಖನನ ನಡೆಸಿದೆ.  ಉತ್ಖನನವು ಪಾರದರ್ಶಕವಾಗಿದೆ. ವಿಡಿಯೋ ಮಾಡಲಾಗಿದೆ. ಈ ಸಂದರ್ಭದಲ್ಲಿ ದೂರುದಾರರ ವಕೀಲರೂ ಹಾಜರಿದ್ದರು ಎಂಬ ಅಂಶವನ್ನೂ ಸರ್ಕಾರ ಉಲ್ಲೇಖಿಸಿದೆ.

ನಂತರದ ಬೆಳವಣಿಗೆಗಳಲ್ಲಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ಅರ್ಜಿದಾರರ ಅಣತಿಯಂತೆ ಹೇಳಿಕೆ ನೀಡಿದ್ದಾಗಿ ಬಿಎನ್‌ ಎಸ್‌ ಎಸ್‌ ಸೆ. 183 ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ ಎದುರು ಹೇಳಿಕೆ ದಾಖಲಿಸಿದ್ದಾನೆ. ಆಗ ತಂದೊಪ್ಪಿಸಿದ ತಲೆ ಬುರುಡೆಯನ್ನೂ ಬೇರೊಬ್ಬರು ತನಗೆ ನೀಡಿದ್ದಾಗಿ ತಿಳಿಸಿದ್ದಾನೆ.  ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಈ ತಲೆ ಬುರುಡೆಯು 25–30 ವರ್ಷದೊಳಗಿನ ಮಹಿಳೆಯದ್ದು ಎಂದು ಸಾಬೀತಾಗಿದೆ. ಡಿಎನ್‌ ಎ ಮತ್ತು ಮಣ್ಣು ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ನಂತರ ಚಿನ್ನಯ್ಯನನ್ನು ಆಗಸ್ಟ್‌ 23ರಂದು ಬಂಧಿಸಲಾಗಿತ್ತು.

More articles

Latest article