ಬೆಂಗಳೂರಿನಲ್ಲಿ 7.11 ಕೋಟಿ ರೂ. ಹಗಲು ದರೋಡೆ : 5.76  ಕೋಟಿ ರೂ ಜಪ್ತಿ, ಮೂವರ ಬಂಧನ

Most read


ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 7.11 ಕೋಟಿ ರೂ. ಹಗಲು ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ  ಸುಮಾರು 5.76  ಕೋಟಿ ರೂ.ಹಣವನ್ನು ವಶಪಡಿಸಿಕೊಳ್ಳುವಲ್ಲಿ  ಯಶಸ್ವಿಯಾಗಿದ್ದಾರೆ.

ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿದ್ದ ಸಿಎಂಎಸ್ ವಾಹನ ನಿರ್ವಹಣೆ ಮಾಡುತ್ತಿದ್ದ ನೌಕರ, ಓರ್ವ ಪೊಲೀಸ್ ಕಾನ್‌ಸ್ಟೆಬಲ್‌ ಮತ್ತು ಸಿಎಂಎಸ್ ಕಂಪನಿಯ ಮಾಜಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ನಗರ ಪೊಲೀಸ್ ಆಯುಕ್ತ  ಸೀಮಾಂತ್ ಕುಮಾರ್ ಸಿಂಗ್ 200 ಮಂದಿ ಪೊಲೀಸರು ಪ್ರಕರಣವನ್ನು ಕೇವಲ 54 ಗಂಟೆಗಳಲ್ಲಿ ಭೇದಿಸಿದ್ದಾರೆ. ಈ ಕೃತ್ಯ ನಡೆಸಲು ಅರೋಪಿಗಳು ಮೂರು ತಿಂಗಳಿಂದ ಸಂಚು ರೂಪಿಸಿದ್ದರು. ಕಳೆದ 15 ದಿನಗಳಿಂದ ದರೋಡೆ ಮಾಡಬೇಕಿದ್ದ ಪ್ರದೇಶವನ್ನು ಪರಿಶೀಲಿಸಿದ್ದರು ಎಂದು ತಿಳಿಸಿದ್ದಾರೆ.

ಒಟ್ಟು 8 ಮಂದಿ ಸೇರಿಕೊಂಡು ಈ ಸಂಚು ರೂಪಿಸಿದ್ದರು. ಈಗ ಮೂವರನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಹುಡುಕಾಟ ನಡೆದಿದೆ ಎಂದರು. ತನಿಖಾ ತಂಡ ಹಾಗೂ ಸಿಬ್ಬಂದಿಗೆ ರೂ. 5 ಲಕ್ಷ ನಗದು ಬಹುಮಾನ ನೀಡುವುದಾಗಿಯೂ ಅವರು ಘೋಷಿಸಿದರು.

ಸಿಎಂಎಸ್‌ ಸಿಬ್ಬಂದಿ ದರೋಡೆ ನಡೆದ ಒಂದೂವರೆ ಗಂಟೆಯ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ನಗರದ ಎಲ್ಲಾ ಭಾಗಗಳಲ್ಲಿ ನಾಕಾಬಂಧಿ ಹಾಕಿದ್ದರು. ದರೋಡೆಕೋರರು ಮೊಬೈಲ್ ಬಳಸುತ್ತಿರಲಿಲ್ಲ ಮತ್ತು ಸಿಸಿಟಿವಿ ಇರದ ಸ್ಥಳಗಳಲ್ಲಿ ವಾಹನ ನಿಲ್ಲಿಸುತ್ತಿದ್ದರು. ಪೊಲೀಸರನ್ನು ದಾರಿ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದಾರೆ. ಅನೇಕ ವಾಹನಗಳನ್ನು ಬಳಸಿದ್ದರಿಂದ ಘಟನೆ ನಡೆದ ದಿನವೇ ಹಣ ಸಾಗಿಸುತ್ತಿದ್ದ ವಾಹನ ಹಿಡಿಯಲು ಸಾಧ್ಯವಾಗಿಲ್ಲ. ವಾಹನಗಳ ನಂಬರ್ ಪ್ಲೇಟ್‌ ಅನ್ನೂ ಪದೇ ಪದೇ ಬದಲಿಸಿದ್ದಾರೆ ಎಂದು ವಿವರಿಸಿದರು.

ತನಿಖೆಗೆ ಒಟ್ಟು 11 ತಂಡಗಳನ್ನು ರಚನೆ ಮಾಡಲಾಗಿದ್ದು, 5 ರಾಜ್ಯಗಳಲ್ಲಿ ಶೋಧ ನಡೆಸಲಾಗಿತ್ತು.  ಮೊದಲ ದಿನವೇ  ಆರೋಪಿಗಳು ಯಾರು ಎನ್ನುವುದು ಮತ್ತು ಬಳಸಿದ ವಾಹನವನ್ನು ಗುರುತಿಸಲಾಗಿತ್ತು. ಆರೋಪಿಗಳು ಆದಷ್ಟೂ ಸಿಸಿಟಿವಿ ಇಲ್ಲದ ಕಡೆ ಸಂಚಾರ ನಡೆಸಿದ್ದಾರೆ. ಆರೋಪಿಗಳಿಗಾಗಿ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ಹುಡುಕಾಟ ನಡೆದಿದೆ ಎಂದೂ ಹೇಳಿದರು.

More articles

Latest article