ನೌಕಾಪಡೆಯ ಹಡಗುಗಳ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಉಡುಪಿಯಲ್ಲಿ ಇಬ್ಬರು ಆರೋಪಿಗಳ ಬಂಧನ

Most read

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ನೌಕಾಪಡೆಯ ಹಡಗುಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಾ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿದ್ದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ರೋಹಿತ್ (29), ಸಂತ್ರಿ (37) ಬಂಧಿತ ಆರೋಪಿಗಳು.

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕೇಂದ್ರ ಸರ್ಕಾರಿ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಇವರಿಬ್ಬರೂ ಕೆಲಸಕ್ಕೆ ಸೇರಿದ್ದರು. ರೋಹಿತ್  ಈ ಹಿಂದೆ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೂ ಆತ ನೌಕಾ ಪಡೆಗೆ ಸಂಬಂಧಪಟ್ಟ ಹಡಗುಗಳ ಸಂಖ್ಯೆ, ಚಲನವಲನ ಪಟ್ಟಿ ಮತ್ತಿತರ ಗೋಪ್ಯ ಮಾಹಿತಿಯನ್ನು ವಾಟ್ಸ್ ಆ್ಯಪ್ ಮೂಲಕ ಅನಧಿಕೃತವಾಗಿ ಹಂಚಿಕೊಂಡು ಹಣ ಸಂಪಾದಿಸುತ್ತಿದ್ದ ಎಂದು ವಿವರಿಸಿದರು.

ಅಲ್ಲಿ ಕೆಲಸ ಬಿಟ್ಟು ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಗೆ ಕೆಲಸಕ್ಕೆ ಸೇರಿಕೊಂಡ ನಂತರವೂ  ರೋಹಿತ್ ಕೊಚ್ಚಿಯಲ್ಲಿರುವ ತನ್ನ ಸ್ನೇಹಿತನಿಂದ ಮಾಹಿತಿ ಪಡೆದು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. ಆರೋಪಿಗಳು ಪಾಕಿಸ್ತಾನಕ್ಕೆ ಗೋಪ್ಯ ಮಾಹಿತಿ ಸೋರಿಕೆ ಮಾಡಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಅವರು ವಿವರಿಸಿದರು.

ಪ್ರಕರಣ ಸಂಬಂಧ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಅಧಿಕಾರಿಗಳು ದೂರು ನೀಡಿದ್ದರು. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದೂ ಹರಿರಾಮ್ ಶಂಕರ್ ತಿಳಿಸಿದರು.

More articles

Latest article