ಶಿವಮೊಗ್ಗ: ನಗರದ ಆರ್ ಎಂಎಲ್ ನಗರದ ಮಾರ್ನಾಮಿಬೈಲ್ ನಲ್ಲಿ ಹರೀಶ್ (35) ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬುದ್ದನಗರದ ನಿವಾಸಿ ಅರ್ಮಾನ್ (21), ಸಿಗೇಹಟ್ಟಿ ಬಡಾವಣೆ ನಿವಾಸಿ ನಿರಂಜನ್ (20) ಹಾಗೂ 17 ವರ್ಷದ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳು.
ಹರೀಶ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣವು ರಾಜಕೀಯ ಕಾದಾಟಕ್ಕೆ ಕಾರಣವಾಗಿತ್ತು. ಅನ್ಯ ಕೋಮಿನವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕೋಮುಬಣ್ಣ ಬಳಿಯಲಾಗಿತ್ತು. ಶಾಸಕ ಚನ್ನಬಸಪ್ಪ ಪೊಲೀಸರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ ರಾಷ್ಟ್ರಭಕ್ತರ ಬಳಗ ಸಂಘಟನೆಯು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿತ್ತು.
ಹರೀಶ್ ಮೇಲೆ ನಡೆದಿದ್ದ ಹಲ್ಲೆಯ ಸಿಸಿ ಕ್ಯಾಮರಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹರೀಶ್ ಮೇಲಿನ ಹಲ್ಲೆಗೆ ಧರ್ಮ ಕಾರಣ ಅಲ್ಲ. ವೈಯಕ್ತಿಕ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇವರಲ್ಲಿ ಓರ್ವನನ್ನು ಹೊರತುಪಡಿಸಿದರೆ ಇನ್ನಿಬ್ಬರು ಹಲ್ಲೆಗೊಳಗಾದ ಹರೀಶ ಧರ್ಮಕ್ಕೆ ಸೇರಿದವರಾಗಿದ್ದಾರೆ.
ಗುರಾಯಿಸಿ ನೋಡಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಆರೋಪಿಗಳೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಕೆಲವು ರಾಜಕಾರಣಿಗಳು ಆರೋಪಿಸುವಂತೆ, ಇದು ಕೋಮು ವೈಷಮ್ಯದ ಹಲ್ಲೆಯಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮೂವರು ಆರೋಪಿಗಳು ರಸ್ತೆ ಬದಿ ಕುಳಿತುಕೊಂಡಿದ್ದರು. ಆಗ ಆ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದ ಹರೀಶ್ ಅವರನ್ನು ಗುರಾಯಿಸಿ ನೋಡಿದ್ದಾನೆ. ಇದೇ ಕಾರಣಕ್ಕೆ ಜಗಳ ಪ್ರಾರಂಭವಾಗಿ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಹರೀಶ್ ಗೆ ನಿಂದಿಸಿದ್ದಾರೆ. ಈ ವೇಳೆ ಕೈ ಕೈ ಮಿಲಾಯಿಸಿದ್ದಾರೆ. ಆರೋಪಿಗಳು ಹರೀಶ್ ಅವರನ್ನು ಬೆನ್ನಟ್ಟಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ರವಿ ಪಾಟೀಲ್ ಅವರು ಯಶಸ್ವಿಯಾಗಿ ಈ ಪ್ರಕರಣವನ್ನು ಬೇಧಿಸಿದ್ದಾರೆ.
ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲವೆಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಕೋಮು ಬಣ್ಣವನ್ನು ಬಳಿದು ರಾಜಕೀಯ ಲಾಭ ಪಡೆಯಲು ಹವಣಿಸಿದ್ದರು. ಆದರೆ ಅವರ ಸಂಚು ಬಯಲಾಗಿದೆ.

