ಚಿಕ್ಕಮಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ, ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಚಿಕ್ಕಮಗಳೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, “ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಚಿಕ್ಕಮಗಳೂರು. ಹೀಗಾಗಿ ಚಿಕ್ಕಮಗಳೂರು ಜಿಲ್ಲೆ ಎಂದರೆ ಪ್ರತಿಯೊಬ್ಬರೂ ಹುಮ್ಮಸ್ಸಿನಿಂದ ಕೆಲಸ ಮಾಡಲು ಸಿದ್ಧರಾಗಿದ್ದೇವೆ. ಆ ಮೂಲಕ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ,” ಎಂದರು.
“ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ನಿಗದಿಪಡಿಸಿದ 14 ತಿಂಗಳಲ್ಲಿ ಅತ್ಯಾಧುನಿಕ ಹೈಟೆಕ್ ಬಸ್ ನಿಲ್ದಾಣವನ್ನು ಸಿದ್ಧಪಡಿಸಲಾಗುವುದು. ಇದರ ಉದ್ಘಾಟನೆಯನ್ನು ಮತ್ತಷ್ಟು ವಿಜೃಂಭಣೆಯಿಂದ ಕೈಗೊಳ್ಳಲಾಗುವುದು,” ಎಂದು ಸಚಿವರು ಹೇಳಿದರು.
ಚಿಕ್ಕಮಗಳೂರಿನವರಿಗೇ ಜಿಲ್ಲಾ ಉಸ್ತುವಾರಿ:
“ನಾನು 1971ರಿಂದ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದೇನೆ. ಆದರೆ, ಬೆಂಗಳೂರಿನಲ್ಲಿ ಗೆದ್ದು ಸಚಿವನಾಗಿದ್ದೇನೆ. ನಾನು ಚಿಕ್ಕಮಗಳೂರು ಉಸ್ತುವಾರಿ ಸಚಿವನಾಗಿದ್ದು ಆಕಸ್ಮಿಕ. ಜಿಲ್ಲೆಯಿಂದ ಐವರು ಶಾಸಕರಿದ್ದು, ಹಿರಿಯರೂ ಇದ್ದಾರೆ. ಮುಂದೆ ಸಚಿವ ಸಂಪುಟ ಪುನಾರಚನೆ ವೇಳೆ ಜಿಲ್ಲೆಯಿಂದ ಆಯ್ಕೆಯಾಗಿ ಬಂದ ಒಬ್ಬರನ್ನು ಸಚಿವರನ್ನಾಗಿ ನೇಮಿಸಬೇಕು ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡಿದ್ದೇನೆ,” ಎಂದು ತಿಳಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡಿದ್ದಾರೆ. ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವನರು ಅಜಾತ ಶತ್ರು. ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಾ ರಚನಾತ್ಮಕ ಕೆಲಸಗಳನ್ನು ಮಾಡುತ್ತಾರೆ. ಸಚಿವ ಸಂಪುಟ ಸಭೆಗೆ ಅವರು ತೆಗೆದುಕೊಂಡು ಬರುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರೂ ತಕ್ಷಣವೇ ಒಪ್ಪಿಕೊಳ್ಳುತ್ತಾರೆ. ಅದರಂತೆ ಈ ಬಸ್ ನಿಲ್ದಾಣವನ್ನು ಚಿಕ್ಕಮಗಳೂರಿಗೆ ಸಾರಿಗೆ ಸಚಿವರು ನೀಡುತ್ತಿದ್ದಾರೆ,” ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕ್ರೆಡಲ್ ಅಧ್ಯಕ್ಷ ಹಾಗೂ ಶಾಸಕ ಹೆಚ್.ಎಲ್.ಬೋಜೇಗೌಡ, ಶಾಸಕ ಹೆಚ್.ಡಿ.ತಮ್ಮಯ್ಯ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಮುಖಂಡರಾದ ಕೆ.ಎಸ್.ಶಾಂತೇಗೌಡ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

