ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧೀಕರಣ ಬಹಳ ದುರ್ಬಲವೇ ಹೌದು. ಕರ್ನಾಟಕದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕರ್ನಾಟಕದ ಲೋಕ ಸಭಾ ಮತ್ತು ರಾಜ್ಯ ಸಭಾ ಸದಸ್ಯರುಗಳು ಒಟ್ಟಾಗಿ ಧ್ವನಿ ಎತ್ತಿದ್ದು ಕಡಿಮೆ ಅಥವಾ ಇಲ್ಲ. ಹೆಚ್ಚಿನವರಿಗೆ ಭಾಷಾ ಸಮಸ್ಯೆ ಇದೆ. ಮತ್ತೆ ಕೆಲವರು ಬೇಕಾದಷ್ಟು ಅಂಕಿ ಅಂಶಗಳನ್ನು ಸಂಗ್ರಹಿಸಿಕೊಂಡು ಬರುವುದಿಲ್ಲ. ಹೈಕಮಾಂಡ್ ಮುಖ ನೋಡಿಕೊಂಡು ಕುಳಿತಿರುವವರು ಹಲವರು. ಹೀಗಾಗಿ ಕಾವೇರಿ ವಿವಾದ, ಮಹದಾಯಿ ವಿವಾದ, ತ್ರಿಭಾಷಾ ಸೂತ್ರ ಮತ್ತಿತರ ವಿಷಯಗಳಲ್ಲಿ ಕರ್ನಾಟಕಕ್ಕೆ ವಿಶೇಷವಾದ್ದನ್ನು ಸಾಧಿಸಲಾಗಲೇ ಇಲ್ಲ. ಬಜೆಟ್ ಕೊಡುಗೆಗಳು, ರೈಲ್ವೇ ಅನುದಾನಗಳು – ಇತ್ಯಾದಿಗಳ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಪಡೆಯುವಲ್ಲಿ, ವಿಶೇಷ ಅನುದಾನ ಗಿಟ್ಟಿಸಿಕೊಳ್ಳುವಲ್ಲಿ ಕರ್ನಾಟಕ ಸದಾ ಹಿಂದೆ. ಇಂಥ ದಯನೀಯ ಸಂದರ್ಭದಲ್ಲಿ ತೆರಿಗೆ ತಾರತಮ್ಯವನ್ನು ವಿರೋಧಿಸಿ ಕರ್ನಾಟಕ ಸರಕಾರವು ದೆಹಲಿಯ ಜಂತರ್ ಮಂತರ್ ನಲ್ಲಿ ಫೆಬ್ರವರಿ 7, 2024 ರಂದು ನಡೆಸಿದ ಪ್ರತಿಭಟನೆಗೆ ಬಹಳ ಮಹತ್ವವಿದೆ. ಈ ಪ್ರತಿಭಟನೆಯು ಕೇಂದ್ರ ಸರಕಾರವನ್ನು ಬೆಚ್ಚಿ ಬೀಳಿಸಿದೆ. ದೇಶದ ಇತರ ರಾಜ್ಯಗಳೂ ಕೇಂದ್ರದ ತಾರತಮ್ಯವನ್ನು ಪ್ರಶ್ನಿಸಲು ಆರಂಭಿಸಿವೆ.
ಈ ನಡುವೆ ಕೇಂದ್ರ ಸರಕಾರದ ಕೈಯಲ್ಲಿರುವ ದೆಹಲಿ ಪೊಲೀಸ್ ಕರ್ನಾಟಕ ಸರಕಾರದ ಪ್ರತಿಭಟನಾ ಕಾರ್ಯಕ್ರಮಕ್ಕೆ ಒಂದಷ್ಟು ತೊಂದರೆಯನ್ನೂ ನೀಡಿತು. ಬೆಳಗ್ಗೆ 10:30 ರಿಂದ 12:30ರ ವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ಇದೆಯೆಂದೂ, ಮುನ್ನೂರು ಜನರಿಗಿಂತ ಹೆಚ್ಚು ಜನ ಭಾಗವಹಿಸಬಾರದೆಂದೂʼ ಅದು ಸೂಚನೆ ನೀಡಿತು. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅದನ್ನು ಆರಂಭದಲ್ಲಿಯೇ ಸಾಕಷ್ಟು ಎತ್ತರದ ಧ್ವನಿಯಲ್ಲಿ ಸಭೆಗೆ ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಕೇವಲ ಎರಡು ಭಾಷಣಗಳಷ್ಟೇ ಇದ್ದುವು. ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಡಿಕೆಶಿಯವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬಹಳ ಸೊಗಸಾಗಿ ʼ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕೇಂದ್ರ ಸರಕಾರಕ್ಕೆ ಹೇಳಿದ್ದರೂ ಅವರು ಕಿವಿಗೆ ಹಾಕಿಕೊಂಡಿಲ್ಲ . ಅದಕ್ಕಾಗಿ ಕೇಂದ್ರದ ಕಿವಿಗೆ ಬೀಳಲೆಂದೇ ನಾವು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲ, ಬದಲು ಕರ್ನಾಟಕ ಸರಕಾರದ ಪ್ರತಿಭಟನೆ. ಅದಕ್ಕೆ ಪಕ್ಷದ ಬಾವುಟ ಇಲ್ಲಿ ಹಾರಿಸಿಲ್ಲ, ರಾಷ್ಟ್ರ ಧ್ವಜವನ್ನು ಹಾರಿಸಿದ್ದೇವೆʼ ಎಂದರು.
ಮುಂದುವರೆದು, ಕೇಂದ್ರ ಸರಕಾರದ ಬಜೆಟ್ ಭಾಷಣದ ಪ್ರತಿಯಿಂದ ಕೆಲವು ಸಾಲುಗಳನ್ನು ಎತ್ತಿಕೊಂಡ ಅವರು ʼ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಪಾಲಿನ ಹಣ ನಾವು ಕೇಳುತ್ತಿದ್ದೇವೆ. ಬೇರೆ ರಾಜ್ಯಗಳು ಲಾಭ ಪಡೆಯಲಿ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಕೇಂದ್ರ ಸರ್ಕಾರ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದೆ. ನಮ್ಮ ರಾಜ್ಯಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ಎಲ್ಲಾ ರಾಜ್ಯಗಳಿಗೂ ಇಂತಹ ಯೋಜನೆ ನೀಡಲಿ. ಭಾರತ ಒಕ್ಕೂಟ ರಾಷ್ಟ್ರ. ನಮಗೂ ಯೋಜನೆ ನೀಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ನಮಗೆ ಅವಕಾಶ ನೀಡಿದರೆ ನಾವು ಅವರಿಗಿಂತ ಹೆಚ್ಚು ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇವೆʼ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ”ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಒಂದು ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯವನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವಾದರೆ ಆ ಸರ್ಕಾರ ಯಾಕಿರಬೇಕು” ಎಂದು ಪ್ರಶ್ನಿಸಿದರು.
ಆನಂತರ ಮಾತಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅತ್ಯಂತ ಪ್ರೌಢವಾಗಿ ತಮ್ಮ ವಿಚಾರಗಳನ್ನು ಸಭೆಯ ಮುಂದಿಟ್ಟರು. ಅನೇಕ ಅಂಕಿ ಅಂಶಗಳನ್ನು ತನ್ನ ನೆನಪಿನಿಂದಲೇ ಹೆಕ್ಕಿ ತೆಗೆದ ಅವರು ʼ 14 ನೇ ಹಣಕಾಸು ಆಯೋಗದ ಅಡಿಯಲ್ಲಿ, ಕರ್ನಾಟಕದ ಹಂಚಿಕೆ 4.71% ಇತ್ತು, ಆದರೆ ಇದು 15 ನೇ ಹಣಕಾಸು ಆಯೋಗದಲ್ಲಿ 3.64% ಕ್ಕೆ ಕುಸಿಯಿತು. ಇದರ ಪರಿಣಾಮವಾಗಿ ಕರ್ನಾಟಕಕ್ಕೆ ₹73,593 ಕೋಟಿ ನಷ್ಟವಾಗಿದೆʼ ಎಂದು ಹೇಳಿದರು.
ಮತ್ತೆ ಮುಂದುವರಿದು, 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡುವಂತೆ ವರದಿ ನೀಡಿತ್ತು. ಅದರ ಪ್ರಕಾರ ಕರ್ನಾಟಕಕ್ಕೆ ₹25,459 ಕೋಟಿ ಅನುದಾನ ಬಿಡುಗಡೆಯಾಗಬೇಕಿತ್ತು, ಆದರೆ ನಮ್ಮ ದುರ್ದೈವ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಇನ್ನು ಕರ್ನಾಟಕವು ಕಂಡು ಕೇಳರಿಯದಂತ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕರ್ನಾಟಕದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಬರ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಒಕ್ಕೂಟ ಸರ್ಕಾರಕ್ಕೆ ರಾಜ್ಯ ಸರ್ಕಾರವು ವಿಶೇಷ ಬರ ಪರಿಹಾರ ನಿಧಿ ಅಡಿಯಲ್ಲಿ ₹18,177 ಕೋಟಿ ಬರ ಪರಿಹಾರ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಆದರೆ ಮೋದಿ ಸರ್ಕಾರದಿಂದ ಇಲ್ಲಿಯವರೆಗೂ ಬರ ಪರಿಹಾರಕ್ಕೆ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ, 2021-22ರಲ್ಲಿ ₹20,000 ಕೋಟಿ, ಮತ್ತು 2022-23ರಲ್ಲಿ ₹13,000 ಕೋಟಿಯಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇವತ್ತು ನಾವು ಕಟ್ಟಿದ ತೆರಿಗೆ ಪ್ರತಿ ₹ 100 ಕ್ಕೆ ಕೇಂದ್ರ ಸರ್ಕಾರ ವಾಪಾಸು ನೀಡುವುದು ಕೇವಲ ₹ 13.9 ಮಾತ್ರ ಎಂದರು.
2023-24 ರ ಬಜೆಟ್ಟಲ್ಲಿ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗಾಗಿ ₹5,300 ಕೋಟಿ ಹಣವನ್ನು ಘೋಷಿಸಿತ್ತು. ಆದರೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಈ ಯೋಜನೆಗಾಗಿ ನಯಾ ಪೈಸೆ ಹಣ ಕೂಡ ಬಿಡುಗಡೆಯಾಗಿಲ್ಲ. ಮಹದಾಯಿ ಯೋಜನೆ ಉತ್ತರ ಕರ್ನಾಟಕದ ಜೀವನಾಡಿಯಾಗಿದೆ. ಅದಕ್ಕೂ ಕೇಂದ್ರ ಸರ್ಕಾರ ಅನುಮೋದನೆಯನ್ನೇ ನೀಡದೆ ಸತಾಯಿಸುತ್ತಿದೆ. ಇಂಥ ಅನೇಕ ಅನ್ಯಾಯಗಳನ್ನು ಪ್ರಶ್ನಿಸಲು ನಾವಿಲ್ಲಿಗೆ ಬಂದಿದ್ದೇವೆʼ ಎಂದು ಅವರು ಹೇಳಿದರು.
ಡಿಕೆಶಿಯಾಗಲೀ ಸಿದ್ದರಾಮಯ್ಯನವರಾಗಲೀ ಇವತ್ತು ಜಂತರ್ ಮಂತರ್ನಲ್ಲಿ ರಾಜಕೀಯ ಭಾಷಣ ಮಾಡಲಿಲ್ಲ. ರಾಜ್ಯಕ್ಕಾಗುತ್ತಿರುವ ಅನ್ಯಾಯಗಳನ್ನು ಅತ್ಯಂತ ತಾಳ್ಮೆಯಿಂದ ವಿವರವಾಗಿ ಜನರ ಮುಂದಿಟ್ಟ ಅವರುಗಳು ಆ ಕಾರಣಕ್ಕೇ ಸೇರಿದ ಜನಸ್ತೋಮಕ್ಕೆ ಬಹಳ ಇಷ್ಟವಾದರು.
ಕರ್ನಾಟಕದ ಹಿರಿಯ ಮಂತ್ರಿಗಳೂ, ವಿಧಾನ ಸಭಾ ಸದಸ್ಯರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮಾಧ್ಯಮಗಳ ಜೊತೆಗೆ ಪರ್ಯಾಯ ಮಾಧ್ಯಮಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕನ್ನಡ ಪ್ಲಾನೆಟ್ ವಿಶೇಷ ವರದಿಗಾರ