ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಸಲ್ಲಿಕೆ

Most read

ನವದೆಹಲಿ: ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನಗಳನ್ನು ನೀಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಬೇಕು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಕೊಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಸಲ್ಲಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಅವರು ಪ್ರಧಾನಿ ಅವರನ್ನು ಭೇಟಿ ಮಾಡಿ ಈ ಯೋಜನೆಗಳಿಗೆ ಅನುಮೋದನೆ ಕೊಡಿಸುವಂತೆ ಮನವಿ ಮಾಡಿಕೊಂಡರು.

ಮನವಿ ಪತ್ರದ ಮುಖ್ಯಾಂಶಗಳು ಹೀಗಿವೆ…

ಕರ್ನಾಟಕವು ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ನಾವು ಅನುಷ್ಠಾನಗೊಳಿಸಿರುವ ಹಾಗೂ ಜಾರಿಗೆ ತರುತ್ತಿರುವ ನೀರಾವರಿ ಯೋಜನೆಗಳ ಫಲವಾಗಿ ಒಣ ಭೂಮಿಯು ಫಲವತ್ತತೆಯ ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದೆ. ರಾಜ್ಯ ಸರ್ಕಾರವು ಕೃಷಿ ಉತ್ಪಾದನೆ ಹೆಚ್ಚಿಸಲು, ರೈತರಿಗೆ ಉತ್ತಮ ಆದಾಯ ದೊರಕಿಸಿಕೊಡಲು ಅಗತ್ಯವಿರುವಷ್ಟು ನೀರನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕದ ಜಲಸಂಪನ್ಮೂಲ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದೊಂದಿಗೆ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ:

ಕಾವೇರಿ ನದಿಯ ಮೇಕೆದಾಟು ಯೋಜನೆಗೆ ಸಂಬಂಧಿಸಿ ತಮಿಳುನಾಡು ರಾಜ್ಯದ ವಿವಿಧ ಅರ್ಜಿಗಳನ್ನು ಮಾನ್ಯ ಸುಪ್ರೀಂ ಕೋರ್ಟ್ ನವೆಂಬರ್‌ 13, 2025ರಂದು ವಜಾಗೊಳಿಸಿರುವುದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವ ವಿಚಾರವಾಗಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ದಂತಹ ತಜ್ಞ ಸಮಿತಿಗಳಿಗೆ ಸೂಚಿಸಿದೆ. ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಮನವಿ ಮಾಡಿದ್ದು, ಕೇಂದ್ರ ಸರ್ಕಾರವು ತ್ವರಿತವಾಗಿ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವ ಮೂಲಕ ಅನುಮತಿ ಕೊಡಿಸುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (KWDT-II) ತೀರ್ಪು ಘೋಷಣೆಯಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಇನ್ನೂ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿಲ್ಲ. ಈ ಯೋಜನೆಗಾಗಿ ರಾಜ್ಯ ಸರ್ಕಾರವು ಹೆಚ್ಚಿನ ಮೊತ್ತವನ್ನು ವ್ಯಯಿಸಿದೆಯಾದರೂ, ಅಧಿಸೂಚನೆ ಹೊರಡಿಸಲು ತಡ ಮಾಡಿರುವುದರಿಂದ ಇನ್ನೂ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಿಲ್ಲ. ದಯಮಾಡಿ ಇದನ್ನೂ ತ್ವರಿತವಾಗಿ ಇತ್ಯರ್ಥಗೊಳಿಸಿ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು 2023-24ರ ಬಜೆಟ್‌ನಲ್ಲಿ ₹5,300 ಕೋಟಿ ಅನುದಾನ ಘೋಷಿಸಿತ್ತು. ಈ ಸಂಬಂಧ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದರೂ ಇನ್ನೂ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ನೀವು ಈ ಸಂಬಂಧ ಮಧ್ಯಪ್ರವೇಶಿಸಿದರೆ, ನೆರವು ದೊರೆಯುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಕರ್ನಾಟಕದ ಬರಗಾಲ ಪೀಡಿತ ಪ್ರದೇಶಕ್ಕೆ ಬಹಳ ಸಹಕಾರಿಯಾಗಲಿದೆ.

ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲಾ ಯೋಜನೆಗೆ (ಮಹದಾಯಿ) 2022ರ ಡಿಸೆಂಬರ್‌ನಲ್ಲಿ ಕೇಂದ್ರ ಜಲ ಆಯೋಗ/ಜಲಶಕ್ತಿ ಸಚಿವಾಲಯವು ಅನುಮತಿ ನೀಡಿದೆ. ಆದರೆ ಈ ಯೋಜನೆಗಳಿಗೆ ಯಾವುದೇ ಕಾನೂನು ಅಡೆತಡೆಗಳು ಇಲ್ಲದಿದ್ದರೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (Ministry of Environment, Forest and Climate Change) ಇನ್ನೂ ಕಾಡು/ವನ್ಯಜೀವಿ ಅನುಮೋದನೆ (Forest/Wildlife Clearance) ಸಿಕ್ಕಿಲ್ಲ. ಇದರಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ನೀವು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಕೋರುತ್ತೇನೆ.

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ (NWDA) ನದಿಗಳ ಜೋಡಣೆ ಯೋಜನೆಯಡಿ ಸಮಾನತೆ ಮತ್ತು ನ್ಯಾಯಯುತ ಹಂಚಿಕೆ ತತ್ವದಡಿ ಕರ್ನಾಟಕಕ್ಕೆ ನ್ಯಾಯಯುತ ನೀರು ಹಂಚಿಕೆ ಮಾಡಬೇಕು ಎಂಬ ನಮ್ಮ ಮನವಿಯನ್ನು ಪರಿಗಣಿಸಬೇಕು. ಈ ಸಂಬಂಧ ಅಗತ್ಯ ಬೆಂಬಲವನ್ನು ನೀಡಬೇಕು.

ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿ ಬಾಕಿ ಇರುವ ಯೋಜನೆಗಳು / ಸಮಸ್ಯೆಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಮೂಲಕ ನಿಮ್ಮ ಗಮನಕ್ಕೆ ತಂದಿದ್ದೇನೆ. ಇದನ್ನು ದಯವಿಟ್ಟು ಪರಿಶೀಲಿಸಬೇಕೆಂದು ಮನವಿ ಮಾಡುತ್ತೇನೆ.

ಕರ್ನಾಟಕದ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿ ಬಾಕಿ ಉಳಿದಿರುವ ಪ್ರಸ್ತಾವನೆಗೆ ಅನುಮತಿ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಗೆ ನಿರ್ದೇಶನ ನೀಡಲು ತಮ್ಮಲ್ಲಿ ವಿನಂತಿಸುತ್ತೇನೆ. ನಿಮ್ಮ ನಾಯಕತ್ವದಡಿ ಕೇಂದ್ರ ಸರ್ಕಾರವು ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಿ, ರಾಜ್ಯದ ನೀರಾವರಿ ವಲಯದ ಸಮಗ್ರ ಅಭಿವೃದ್ಧಿಗೆ ಮತ್ತು ವಿಶೇಷವಾಗಿ ರೈತರ ಕಲ್ಯಾಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಕೋರುತ್ತೇನೆ ಹಾಗೂ ನೀವು ರಾಜ್ಯಕ್ಕೆ ಸಹಕಾರವನ್ನು ನೀಡುತ್ತೀರಿ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದ್ದಾರೆ.

More articles

Latest article