ಪ್ರಕೃತಿ ವಿಕೋಪ: ಎನ್.ಡಿ.ಆರ್.ಎಫ್ ನಿಂದ ರೂ. 614.9 ಕೋಟಿ ವಿಶೇಷ ನೆರವು ನೀಡುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ

Most read

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಸಂಜೆ ಭೇಟಿಯಾಗಿ ರಾಜ್ಯದ ಪ್ರಮುಖ ಐದು ಬೇಡಿಕೆಗಳನ್ನು ಕುರಿತು ಮನವಿಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು ಹಾಜರಿದ್ದರು.

ಕರ್ನಾಟಕದಲ್ಲಿ ಗಂಭೀರ ಮತ್ತು ಭೀಕರ ಪ್ರಕೃತಿ ವಿಕೋಪ ಉಂಟಾಗಿದ್ದು,  “ರಕ್ಷಣಾ ಮತ್ತು ಪರಿಹಾರ” ವಿಭಾಗದ ಅಡಿಯಲ್ಲಿ ಎನ್.ಡಿ.ಆರ್.ಎಫ್ ನಿಂದ ರೂ. 614.9 ಕೋಟಿ ವಿಶೇಷ ನೆರವನ್ನು ನೀಡುವಂತೆ ಅವರು ಕೋರಿದರು.

ಮನವಿ ಪತ್ರದ ಸಾರಾಂಶ ಹೀಗಿದೆ…..

ಈ ವರ್ಷ ಕರ್ನಾಟಕವು ಅತಿಹೆಚ್ಚಿನ ಮಳೆಯಿಂದಾಗಿ ಎದುರಿಸುತ್ತಿರುವ ಗಂಭೀರ ಮತ್ತು ಭೀಕರ ಪ್ರಕೃತಿ ವಿಕೋಪದ ಕುರಿತು ವೈಯಕ್ತಿಕವಾಗಿ ನಿಮ್ಮ ಗಮನಕ್ಕೆ ತರಲು ನಾನು ವಿನಂತಿಸಿದ್ದೆ, ತಾವು ನವೆಂಬರ್ 17ರಂದು ಸಮಯ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ.

ಈ ವರ್ಷದ ಮಳೆ ಆರಂಭವು ಸಾಮಾನ್ಯ ದಿನಾಂಕವಾದ ಜೂನ್‌ 4ಕ್ಕೆ ಬದಲಾಗಿ ಮೇ 24, 2025 ರಂದು ಪ್ರಾರಂಭವಾಯಿತು, ಇದು ಸಾಮಾನ್ಯ ವೇಳಾಪಟ್ಟಿಗಿಂತ 12 ದಿನ ಮುಂಚಿತವಾಗಿದೆ. ಕರ್ನಾಟಕವು 1910ರಿಂದ ಈ ವರೆಗೆ ಮೊದಲ ಬಾರಿಗೆ– 100 ವರ್ಷಗಳಲ್ಲೇ ಮೇ ತಿಂಗಳಲ್ಲಿ ಅತ್ಯಧಿಕ ಮಳೆಯನ್ನೂ ದಾಖಲಿಸಿದೆ. ಇದರಿಂದ ಜಲಾಶಯಗಳು ತುಂಬಿಕೊಂಡಿದ್ದು, ಹಾಗೆಯೇ ಅಂತರ್ಜಲ ಮಟ್ಟ ಕೂಡ ಸಾಕಷ್ಟು ವೃದ್ಧಿಯಾಗಿದೆ. ಕಾವೇರಿ ಕಣಿವೆಯ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳು 2025ರ ಜೂನ್ ತಿಂಗಳಲ್ಲಿಯೇ ಪೂರ್ಣ ಸಾಮರ್ಥ್ಯವನ್ನು ತಲುಪಿದ್ದವು – ಇದು ಕಳೆದ 85 ವರ್ಷಗಳಲ್ಲಿ ಮೊದಲ ಬಾರಿಗೆ ನಡೆದಿದೆ.

ಆರಂಭದಲ್ಲಿ ಇದು ಅನುಕೂಲಕರವಾಗಿದ್ದರೂ ನಂತರದ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಕೃಷಿ ಭೂಮಿ ಸಂಪೂರ್ಣ ಮುಳುಗಲು, ಪ್ರವಾಹಗಳಿಂದ ಬೆಳೆ ಹಾಗೂ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗುವುದಕ್ಕೂ ಕಾರಣವಾಯಿತು. ಅದರಲ್ಲೂ ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಹಾನಿಯಾಯಿತು. ಒಟ್ಟು ಮಳೆಯ ಪ್ರಮಾಣ ಅಂಕಿಅಂಶಗಳ ಪ್ರಕಾರ “ಸಾಮಾನ್ಯ”ವಾಗಿದ್ದರೂ, ಮಳೆಯ ಸ್ವರೂಪವು ಅತ್ಯಧಿಕವಾಗಿದ್ದು, ಕಡಿಮೆ ಅವಧಿಯಲ್ಲಿ ಕೇಂದ್ರೀಕೃತವಾಗಿ ಬಂದಿದ್ದು, ಅಪಾರ ನಷ್ಟವನ್ನುಂಟುಮಾಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕವು ಈ ವರ್ಷ ಪ್ರವಾಹಗಳಿಂದ ಉಂಟಾದ ಗಂಭೀರ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದೆ. 14.5 ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಪ್ರದೇಶದ ಬೆಳೆ ಹಾನಿಗೊಳಗಾಗಿದ್ದು, ಸುಮಾರು 19 ಲಕ್ಷ ರೈತರು ಬಾಧಿಸಲ್ಪಟ್ಟಿದ್ದಾರೆ. ಇದಲ್ಲದೆ 13,143 ಮನೆಗಳು, 8,216.79 ಕಿಮೀ ರಸ್ತೆ, 2,856 ಶಾಲೆಗಳು, 164 ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs), 2,017 ಅಂಗನವಾಡಿ ಕೇಂದ್ರಗಳು, 43,798 ವಿದ್ಯುತ್ ಕಂಬಗಳು ಮತ್ತು 198 ಸಣ್ಣ ನೀರಾವರಿ ಕೆರೆಗಳು ಹಾನಿಗೊಳಗಾಗಿವೆ. ಹಾನಿಯ ಪಟ್ಟಿಯು ದೊಡ್ಡದಿದೆ ಹಾಗೂ ಅಪಾರ ಪ್ರಮಾಣದ ನಷ್ಟವಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ ಲಭ್ಯವಿರುವ ಸಂಪೂರ್ಣ ಎಸ್.ಡಿ.ಆರ್.ಎಫ್ ನಿಧಿಯಾದ ₹984.42 ಕೋಟಿ ಮೊತ್ತವನ್ನು ರೈತರಿಗೆ ‘ಬೆಳೆ ಇನ್‌ಪುಟ್ ಸಬ್ಸಿಡಿ’ ವಿತರಿಸಲು ಮೀಸಲಿಟ್ಟಿದೆ, ಏಕೆಂದರೆ ರೈತರ ಹಿತವು ನಮ್ಮ ರಾಜ್ಯದ ಮೊದಲ ಆದ್ಯತೆಯಾಗಿದೆ. ಆದರೆ ಒಟ್ಟು ಅವಶ್ಯಕತೆ ₹1,499.32 ಕೋಟಿ ಆಗಿರುವ ಕಾರಣ ₹514.9 ಕೋಟಿಯ ಕೊರತೆ ಎದುರಾಗಿದೆ. ಎಸ್.ಡಿ.ಆರ್.ಎಫ್ ನ ಮುಂದಿನ ಕಂತು ಜೂನ್ 2026 ರವರೆಗೆ ಲಭ್ಯವಿಲ್ಲದ ಕಾರಣ, ಈ ಕೊರತೆಯನ್ನು ಭರಿಸಲು ₹514.9 ಕೋಟಿ ಹಾಗೂ ಅನಿರೀಕ್ಷಿತ ಅಗತ್ಯಗಳಿಗೆ ಹೆಚ್ಚುವರಿ ₹100 ಕೋಟಿ ಅವಶ್ಯಕವಾಗಿದೆ. ಆದ್ದರಿಂದ, “ರಕ್ಷಣಾ ಮತ್ತು ಪರಿಹಾರ” ವಿಭಾಗದ ಅಡಿಯಲ್ಲಿ ಎನ್.ಡಿ.ಆರ್.ಎಫ್ ನಿಂದ ರೂ. 614.9 ಕೋಟಿ ವಿಶೇಷ ನೆರವನ್ನು ಕರ್ನಾಟಕ ಕೇಳುತ್ತಿದೆ.

ಎಸ್.ಡಿ.ಆರ್.ಎಫ್ ನ “ಪುನಶ್ಚೇತನ ಮತ್ತು ಪುನರ್‌ನಿರ್ಮಾಣ” ವಿಭಾಗಕ್ಕಾಗಿ ಒಂದೂ ರೂಪಾಯಿ ನಿಧಿ ಉಳಿದಿಲ್ಲ. ಭಾರತ ಸರ್ಕಾರದ ಮಾರ್ಗಸೂಚಿಗಳು ಸಂಖ್ಯೆ 33-7/2021-NDM.I ದಿನಾಂಕ: 14.08.2024, ರಾಜ್ಯಗಳಿಗೆ “ಪುನಶ್ಚೇತನ ಮತ್ತು ಪುನರ್‌ನಿರ್ಮಾಣ (PDNA)” (ಪ್ರಾಕೃತಿಕ ವಿಕೋಪಗಳ ನಂತರದ ಅವಶ್ಯಕತೆಗಳ ಮೌಲ್ಯಮಾಪನ) ಅಂಗವಾಗಿ ವಿಶೇಷ ನೆರವು ನೀಡಲು ಅನುವು ಮಾಡಿಕೊಡುತ್ತವೆ. ಆದ್ದರಿಂದ ಕರ್ನಾಟಕಕ್ಕೆ ಪಿಡಿಎನ್‌ಎ ವಿಭಾಗದ ಅಡಿ ನಿಧಿಯನ್ನು ಕೋರುತ್ತಿದ್ದೇನೆ.

ಎರಡು ವಿವರವಾದ ಮನವಿಗಳನ್ನು – (i) “ರಕ್ಷಣಾ ಮತ್ತು ಪರಿಹಾರ” ವಿಭಾಗದ ಅಡಿಯಲ್ಲಿ ಬೆಳೆ ಇನ್‌ಪುಟ್ ಸಬ್ಸಿಡಿ ಹಾಗೂ (ii) “ಪುನಶ್ಚೇತನ ಮತ್ತು ಪುನರ್‌ನಿರ್ಮಾಣ (PDNA)” ವಿಭಾಗದ ಅಡಿಯಲ್ಲಿ ಮೂಲಸೌಕರ್ಯ ಮರುನಿರ್ಮಾಣಕ್ಕಾಗಿ ಜಿಲ್ಲಾ ಮಟ್ಟದ ಅಂತರಇಲಾಖಾ ತಂಡಗಳ ಸಮಗ್ರ ಸ್ಥಳ ಪರಿಶೀಲನೆಯ ನಂತರ ತಯಾರು ಮಾಡಲಾಗಿದೆ. ರಾಜ್ಯ ಮಟ್ಟದ ಅಂತರಇಲಾಖಾ ಸಮಿತಿಯು ಅವುಗಳನ್ನು ಪರಿಶೀಲಿಸಿ ಅನುಮೋದಿಸಿದೆ. “ಪುನಶ್ಚೇತನ ಮತ್ತು ಪುನರ್‌ನಿರ್ಮಾಣ” ಮೌಲ್ಯಮಾಪನವನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಬಹು-ವಿಭಾಗ ತಂಡಗಳನ್ನು ರಚಿಸಲಾಗಿದೆ. ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಸರ್ಕಾರವೂ ಈ ಎರಡೂ ಮನವಿಗಳನ್ನು ಎನ್.ಡಿ.ಆರ್.ಎಫ್ ನಿಂದ ವಿಶೇಷ ಹಣಕಾಸು ನೆರವಿಗಾಗಿ ಅನುಮೋದಿಸಲಾಗಿದೆ.

ಸಾರಾಂಶವಾಗಿ, ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್ ನಿಂದ ಈ ಕೆಳಕಂಡ ಸಹಾಯವನ್ನು ಕೋರುತ್ತದೆ:
(i) ₹614.9 ಕೋಟಿ – “ರಕ್ಷಣಾ ಮತ್ತು ಪರಿಹಾರ” ವಿಭಾಗದ ಅಡಿ ಬೆಳೆ ಇನ್‌ಪುಟ್ ಸಬ್ಸಿಡಿಗಾಗಿ,
(ii) ₹1,521.67 ಕೋಟಿ – “ಪುನಶ್ಚೇತನ ಮತ್ತು ಪುನರ್‌ನಿರ್ಮಾಣ (PDNA)” ವಿಭಾಗದ ಅಡಿಯಲ್ಲಿ ಮೂಲಸೌಕರ್ಯ ಪುನರ್‌ನಿರ್ಮಾಣಕ್ಕಾಗಿ.

ರೈತರಿಗೆ ಉಂಟಾದ ನೈಜ ಬೆಳೆ ಹಾನಿಯು ₹10,000 ಕೋಟಿಗಿಂತ ಹೆಚ್ಚು ಹಾಗೂ ಮೂಲಸೌಕರ್ಯ ಹಾನಿ ₹3,400 ಕೋಟಿಗಿಂತ ಹೆಚ್ಚಾಗಿದ್ದರೂ, ರಾಜ್ಯವು ಪ್ರಕೃತಿ ವಿಕೋಪ ನಿರ್ವಹಣಾ ಮಾರ್ಗಸೂಚಿಗಳಲ್ಲಿ ಅನುಮೋದನೆಗೊಂಡಿರುವ ಮಿತಿಗಳೊಳಗೆ ಮಾತ್ರ ಮನವಿಯನ್ನು ಸಲ್ಲಿಸಿದೆ.

ಈ ಎರಡು ಮನವಿಗಳನ್ನು ವೈಯಕ್ತಿಕವಾಗಿ ಸಲ್ಲಿಸಲು ಹಾಗೂ ಕರ್ನಾಟಕದಲ್ಲಿನ ಗಂಭೀರ ಪರಿಸ್ಥಿತಿಯನ್ನು ನಿಮ್ಮ ಗಮನಕ್ಕೆ ತರಲು ಅವಕಾಶ ನೀಡಿದ್ದಕ್ಕಾಗಿ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

More articles

Latest article