ಢಾಕಾ:2024ರಲ್ಲಿ ವಿದ್ಯಾರ್ಥಿಗಳ ಮುಷ್ಕರವನ್ನು ನಿಯಂತ್ರಿಸಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದೆ.
78 ವರ್ಷದ ಶೇಖ್ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಕಮಲ್ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್–ಮುಮುನ್ ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ನ್ಯಾಯಮಂಡಳಿಯು 54 ಸಾಕ್ಷ್ಯಗಳನ್ನು ಪರಿಶೀಲಿಸಿ, ವಿಚಾರಣೆ ಪೂರ್ಣಗೊಳಿಸಿದ್ದು, ಇಂದು ಈ ತೀರ್ಪು ಪ್ರಕಟಿಸಿದೆ. ಶೇಖ್ ಹಸೀನಾ ವಿರುದ್ಧ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಗಿತ್ತು.
ಹಸೀನಾ ನೇತೃತ್ವದ ಸರ್ಕಾರ ಪ್ರತಿಭಟನಕಾರರ ಮೇಲೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ ಪರಿಣಾಮ 2024ರ ಜುಲೈ 15ರಿಂದ ಆಗಸ್ಟ್ 15ರವರೆಗೆ 1,400 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗ ತಿಳಿಸಿತ್ತು.
ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ದೇಶಾದ್ಯಂತ ಯಾವುದೇ ಅಹಿತಕರ ಘಟನೆ, ಗಲಭೆಗಳು ನಡೆಯದಂತೆ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿತ್ತು. ಮುನ್ನೆಚ್ಚರಿಎಕ ಕ್ರಮವಾಗಿ ಸೇನಾ ಪಡೆಗಳು, ಗಡಿ ಭದ್ರತಾ ಪಡೆ ಹಾಗೂ ಅರೆ ಸೇನಾ ಪಡೆಯ ತುಕಡಿಗಳನ್ನು ರಾಜಧಾನಿ ಢಾಕಾದಲ್ಲಿ ನಿಯೋಜಿಸಲಾಗಿದೆ. ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನೂ ಹೊರಡಿಸಲಾಗಿದೆ.
ಹಸೀನಾ ಅವರು ಆಗಸ್ಟ್ 2024 ರಲ್ಲಿ ಅಧಿಕಾರದಿಂದ ಕೆಳಗಿಳಿಯಲು ಈ ದಂಗೆ ಕಾರಣವಾಗಿತ್ತು. ಅವರು ದೇಶವನ್ನು ಬಿಟ್ಟು ಪಲಾಯನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್ಥಿಕ ಸಂಕಷ್ಟ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಮೊದಲಾದ ಕಾರಣಗಳಿಗಾಗಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು.
ಕಳೆದ ವರ್ಷ ಆಗಸ್ಟ್ 5 ರಂದು ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. ನಂತರ ಯುಎನ್ ವರದಿಯ ಪ್ರಕಾರ ಪ್ರತಿಭಟನೆಗಳ ಸಮಯದಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಸೀನಾ ಮತ್ತು ಅವರ ಸರ್ಕಾರ ಪ್ರತಿಭಟನಾಕಾರರ ವಿರುದ್ಧ ವ್ಯವಸ್ಥಿತವಾಗಿ ಮಾರಕ ಬಲಪ್ರಯೋಗ ಮಾಡಿ ಸುಮಾರು 1,400 ಜನರನ್ನು ಕೊಂದಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತನಿಖಾಧಿಕಾರಿಗಳು ಹೇಳಿದ್ದಾರೆ.
ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದ ಅವರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಭದ್ರತಾ ಪಡೆಗಳಿಗೆ ಆದೇಶಿಸಿದ್ದಾರೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದರು.

