ಬೆಂಗಳೂರು: ಕೆಎಂಎಫ್ ನಂದಿನಿ ತುಪ್ಪ ರಾಜ್ಯ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಇಂತಹ ಶುದ್ಧ ತುಪ್ಪದ ಹೆಸರು ಕೆಡಿಸಲು ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು ಸುಮಾರು 1.50 ಕೋಟಿ ಮೌಲ್ಯದ 8 ಸಾವಿರ ಲೀಟರ್ ನಕಲಿ ನಂದಿನಿ ತುಪ್ಪವನ್ನು ಜಪ್ತಿ ಮಾಡಿದ್ದಾರೆ.
ಈ ತುಪ್ಪ ಈಗಾಗಲೇ ನಂದಿನಿ ಪಾರ್ಲರ್ಗಳಲ್ಲೂ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಖಚಿತಮಾಹಿತಿ ಆಧರಿಸಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ನಕಲಿ ತುಪ್ಪ ಸಂಗ್ರಹಿಸಿದ್ದ ಬೆಂಗಳೂರಿನ ಚಾಮರಾಜಪೇಟೆಯ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ. ಸ್ಯಾಚೆಟ್ ಮತ್ತು ಪ್ಲ್ಯಾಸ್ಟಿಕ್ ಬಾಟಲ್ ಗಳಲ್ಲಿ ತುಂಬಿರಿಸಿದ್ದ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಆತನ ಪುತ್ರ ದೀಪಕ್ ಮತ್ತು ಮುನಿರಾಜು ಬಂಧಿತ ಆರೋಪಿಗಳು. ಮಹೇಂದ್ರ ಎಂಬಾತ ಕೆ.ಎಂ.ಎಫ್ ಉತ್ಪನ್ನಗಳ ವಿತರಕನೂ ಆಗಿದ್ದಾನೆ. ಮುನಿರಾಜು ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು ಪೂರೈಕೆ ಮಾಡುತ್ತಿದ್ದ. ಅಪ್ಪ ಮಕ್ಕಳು ನಂದಿನಿ ಬೂತ್ ಗಳಿಗೆ ಪೂರೈಕೆ ಮಾಡುತ್ತಿದ್ದರು.

