ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್) ಪಥಸಂಚಲನ ನಡೆಸಲು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ಪಥ ಸಂಚನ ನಡೆಯುವುದೇ ಇಲ್ಲವೇ ಎಂಬ ಚರ್ಚೆಗೆ ಕೊನೆಬಿದ್ದಿದೆ. ನವೆಂಬರ್ 16ರ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರವರೆಗೆ ಪಥಸಂಚಲನಕ್ಕೆ ಹೈಕೋರ್ಟ್ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಈ ಪ್ರಕರಣದ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಪಥಸಂಚಲನದಲ್ಲಿ 300 ಮಂದಿ ಗಣವೇಷಧಾರಿಗಳು ಹಾಗೂ 50 ಮಂದಿ ಘೋಷ್ ವೃಂದಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಆರ್ ಎಸ್ ಎಸ್ ಪಥಸಂಚಲನ ನಡೆಸಲು ಅಕ್ಟೋಬರ್ 19ರಂದು ಚಿತ್ತಾಪುರದಲ್ಲಿ ಅನುಮತಿ ಕೋರಿತ್ತು. ಆದರೆ, ಇನ್ನೂ ಎರಡು ಸಂಘಟನೆಗಳು ಅದೇ ದಿನ ಮೆರವಣಿಗೆ ನಡೆಸಲು ಅನುಮತಿ ಕೋರಿದ್ದರು. ಆದ್ದರಿಂದ ಚಿತ್ತಾಪುರ ತಹಶೀಲ್ದಾರ್ ಅವರು ಅನುಮತಿ ನಿರಾಕರಿಸಿದ್ದರು. ತಹಶೀಲ್ದಾರ್ ಆದೇಶ ಪ್ರಶ್ನಿಸಿ ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

