ಜನಪದ ಮತ್ತು ಮೂಲ ಸಂಸ್ಕೃತಿಗಳಲ್ಲಿ ಭಾರತದ ಐಕ್ಯತೆ ಅಡಗಿದೆ: ಡಾ.ಪುರುಷೋತ್ತಮ ಬಿಳಿಮಲೆ

Most read

ಬೆಂಗಳೂರು: ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಜನಪದ ಮತ್ತು ಮುಖ್ಯ ಸಂಸ್ಕೃತಿಗಳ ನಡುವೆ ಯಾವುದೇ ಸಂಘರ್ಷ ಇಲ್ಲದಿರುವ ಕಾರಣ ಭಾರತವು ಸುದೀರ್ಘ ಅವಧಿಗೆ ಒಂದು ದೇಶವಾಗಿ ಉಳಿಯಲು ಸಾಧ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಇಂದು ಚೀನಾದ ಫುಡಾನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಒಂದು ಸಮಾನ ತಾತ್ವಿಕತೆಗೆ ತಮ್ಮನ್ನು ಒಪ್ಪಿಸಿಕೊಂಡಿದ್ದು, ಅದೇ ಸಂದರ್ಭದಲ್ಲಿ ವ್ಯಕ್ತಿಗತ ನಿಲುವುಗಳನ್ನು ಗೌರವಿಸುವ ಮನೋಧರ್ಮವನ್ನು ಸಹ ಹೊಂದಿರುವುದು ಇಲ್ಲಿನ ಏಕತೆಯ ಮೂಲವಾಗಿದೆ ಎಂದರು.

ವಸಾಹತುಶಾಹಿ  ವ್ಯವಸ್ಥೆಗೂ ಪೂರ್ವದಲ್ಲಿ ಭಾರತ ಮತ್ತು ಉಳಿದ ಎಲ್ಲ ಏಷ್ಯಾಖಂಡದ ದೇಶಗಳ ನಡುವೆ ಅತ್ಯುತ್ತಮ ಸಂವಹನ ಜಾರಿಯಲಿತ್ತು. ಚೀನಾ ದೇಶದ ಸಂಸ್ಕೃತಿಯ ಪ್ರಭಾವವನ್ನು ಭಾರತ ಹೊಂದಿತ್ತು. ಅದೇ ರೀತಿ ಇಲ್ಲಿನ ಬೌದ್ಧ ಧರ್ಮ ಚೀನಾವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಕರ್ಷಿಸಿತು ಎಂದ ಬಿಳಿಮಲೆ, ಜಾಗತೀಕರಣದ ನಂತರ ಈ ಎರಡು ದೇಶಗಳು ಪರಸ್ಪರ ಅವಲಂಬಿತವಾಗುವ ಎಲ್ಲ ಅವಕಾಶಗಳಿದ್ದರೂ ಕೆಲವು ಅನಿಯಂತ್ರಿತ ಸಂಘರ್ಷಗಳು ಇದನ್ನು ತಡೆಯುತ್ತಿವೆ. ಕೌಟುಂಬಿಕತೆ ಎನ್ನುವ ಒಂದೇ ಮಾದರಿಯ ಸಂಸ್ಕೃತಿಯನ್ನು ಹೊಂದಿರುವ ಭಾರತ ಮತ್ತು ಚೀನಾ ದೇಶಗಳು ಒಗ್ಗಟ್ಟಾಗಿ ಯೋಚಿಸಬೇಕಾದ ಸಂದರ್ಭ ಇದಾಗಿದೆ ಎಂದರು.

ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಚೀನಾದ ಫುಡಾನ್ ವಿಶ್ವವಿದ್ಯಾಲಯವು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿರುವುದು ಅಭಿನಂದನಾರ್ಹವೆಂದ ಬಿಳಿಮಲೆ, ಇಂತಹ ಶೈಕ್ಷಣಿಕ ವಿನಿಮಯಗಳು ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ವೃದ್ಧಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಚೀನಾದ ಫುಡಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಝಾಂಗ್ ಜಿಯಡಾಂಗ್, ಜಿಯನ್ ಜಂಬೋ, ಗುಯೋ ಡಿಂಗ್ ಪಿಂಗ್, ವೆನ್ ಯವೋ  ಸೇರಿದಂತೆ ಮತ್ತಿತರರು ಹಾಜರಿದ್ದರು.

More articles

Latest article