ದೇಶ ಕಂಡ ದುರ್ಬಲ ಅಸಮರ್ಥ ಗೃಹ ಸಚಿವ ಎಂದರೆ ಅಮಿತ್‌ ಶಾ: ಅವರು ಕೂಡಲೇ ರಾಜೀನಾಮೆ ನೀಡಬೇಕು: ಪ್ರಿಯಾಂಕ್‌ ಖರ್ಗೆ ಆಗ್ರಹ

Most read

ಬೆಂಗಳೂರು: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಭೀಕರ ಕಾರು ಸ್ಫೋಟದ ನೈತಿಕ ಹೊಣೆ ಹೊತ್ತು  ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ಖರ್ಗೆ ಆಗ್ರಹಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಾಂಬ್‌ ಸ್ಫೋಟ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಮಿತ್ ಶಾ ಅತ್ಯಂತ ಅಸಮರ್ಥ, ದುರ್ಬಲ ಗೃಹ ಸಚಿವರು ಎಂದು ವಾಗ್ದಾಳಿ ನಡೆಸಿದರು.

ದೆಹಲಿ, ಮಣಿಪುರ, ಪುಲ್ವಾಮಾ ಮತ್ತು ಪಹೆಲ್ಗಾಮ್ ಬಾಂಬ್‌ ಸ್ಫೋಟದ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳಿಗೆ ಹೊಣೆಗಾರರು ಯಾರು? ದೇಶದ ಗೃಹ ಸಚಿವರು ಹೋಣೆ ಹೊರಬೇಕಲ್ಲವೇ ಎಂದು ಪ್ರಶ್ನಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಅಸಮರ್ಥ ಗೃಹ ಸಚಿವರು ಮತ್ತು ಗುಪ್ತಚರ ಇಲಾಖೆಯ ವೈಫಲ್ಯದ ಕಾರಣಕ್ಕಾಗಿ ಸಾವಿರಾರು ಮಂದಿ ಪ್ರಾಣ ತೆತ್ತಿದ್ದಾರೆ.

ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ತಮ್ಮ ಭಾಷಣದಲ್ಲಿ ಬಾಂಗ್ಲಾದೇಶದವರು ಒಳಗೆ ನುಸುಳುತ್ತಾರೆ ಎಂದು ಹೇಳುತ್ತಾರೆ. ಈಗ ದೇಶದಲ್ಲಿ ಆಡಳಿತ ನಡೆಸುತ್ತಿರುವವರು ಯಾರು? ಇಂತಹ ದುರಂತ ಘಟನೆಗಳಿಗೆ ಹೊಣೆ ಯಾರು ? ಪ್ರಧಾನಿ ಮೋದಿಯವರು ಸಚಿವ ಅಮಿತ್ ಶಾ ಅವರಿಗೆ ಹೆದರುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಮೋದಿ ಅವರೇ ನಿಮ್ಮ 56 ಇಂಚಿನ ಎದೆ ಎಲ್ಲಿ ಹೋಗಿದೆ? ಬೇರೆ ದೇಶದಲ್ಲಿ ಇಂತಹ ದುರಂತ ಸಂಭವಿಸಿದ್ದರೆ ಈ ವೇಳೆಗೆ ಗೃಹ ಸಚಿವರು ರಾಜೀನಾಮೆ ಕೊಡುತ್ತಿದ್ದರು ಎಂದ ಅವರು ನಿಮ್ಮ ಆರ್‌ಎಸ್‌ಎಸ್‌ನವರನ್ನು ಗಡಿಗೆ ಕಳುಹಿಸಿ ಎಂದು ಗುಡುಗಿದರು.

More articles

Latest article