ಬೆಂಗಳೂರು: ರೌಡಿ ಶೀಟರ್ ಹೈದರ್ ಆಲಿ ಕೊಲೆ ಪ್ರಕರಣದ ಆರೋಪಿಯೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಡಿಯೋಗಳನ್ನು ಅಕ್ರಮವಾಗಿ ಚಿತ್ರೀಕರಿಸಿ ಮಾಧ್ಯಮವೊಂದಕ್ಕೆ ಮಾರಾಟ ಮಾಡಿದ್ದಾನೆ ಎಂದು ಕಾರಾಗೃಹ ಇಲಾಖೆಯ ಉನ್ನತ ಮಟ್ಟದ ಮೂಲವೊಂದು ತಿಳಿಸಿದೆ ಎಂದು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ. ಪ್ರಸ್ತುತ ಇದೇ ಕಾರಾಗೃಹದಲ್ಲಿರುವ ನಿಷೇಧಿತ ಐಸಿಸ್ ಸಂಘಟನೆಗಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ಐಸಿಸ್ ಉಗ್ರ ಹಮೀದ್ ಶಕೀಲ್ ಮನ್ನಾ ಮತ್ತು ಚಿನ್ನ ಕಳ್ಳ ಸಾಗಾಣೆದಾರ ತರುಣ್ ರಾಜು ಅವರ ಜೈಲಿನ ಚಟುವಟಿಕೆಗಳು ಕೆಲವು ದಿನಗಳ ಹಿಂದೆಯಷ್ಟೇ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು.
ಸರಣಿ ಕೊಲೆಗಾರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಮೇಶ್ ರೆಡ್ಡಿಯ ವಿಡಿಯೋವನ್ನು ಪವನ್ ಎಂಬಾತ ಚಿತ್ರೀಕರಿಸಿದ್ದ ಎಂದು ತಿಳಿದು ಬಂದಿದೆ. ಬಂಧೀಖಾನೆಯ ಕೈದಿಗಳು ನೃತ್ಯ ಮಾಡುತ್ತಿರುವ ದೃಶ್ಯಗಳೂ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಪರಪ್ಪನ ಅಗ್ರಹಾರ ಸೂಪರಿಂಟೆಂಡೆಂಟ್ ಮಾಗೇರಿ, ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತು ಮಾಡಿರುವುದಾಗಿ ಮತ್ತು ಮುಖ್ಯ ಸೂಪರಿಂಟೆಂಡೆಂಟ್ ಸುರೇಶ್ ಅವರನ್ನು ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ವಿಡಿಯೋಗಳೂ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದರ್ಶನ್ ಆಪ್ತ ನಟ ಧನ್ವೀರ್ ನನ್ನು ಪ್ರಶ್ನಿಸಿ ಆತನ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಸಧ್ಯಕ್ಕೆ ದರ್ಶನ್ ಕೂಡಾ ಇದೇ ಕಾರಾಗೃಹದಲ್ಲಿ ಸಜೆ ಅನುಭವಿಸುತ್ತಿದ್ದಾರೆ.
ಕಾರಾಗೃಹ ಇಲಾಖೆ ಮೂಲಗಳ ಪ್ರಕಾರ ಶಕೀಲ್ ಮನ್ನಾನ ವಿಡಿಯೋವನ್ನು ಆತನದ್ದೇ ಮೊಬೈಲ್ ನಿಂದ ಹೈದರ್ ಆಲಿ ಪ್ರಕರಣದ ಆರೋಪಿ ಚಿತ್ರೀಕರಿಸಿದ್ದಾನೆ. ಜೈಲಿನಲ್ಲಿ ವ್ಯಾಪಕವಾಗಿ ಮೊಬೈಲ್ ಪೋನ್ ಬಳಕೆಯಾಗುತ್ತಿರುವುದನ್ನು ಈ ಪ್ರಕರಣ ದೃಢೀಕರಿಸುತ್ತದೆ. ಆರೋಪಿಯು ಹೈದರ್ ಆಲಿ ಮತ್ತು ತರುಣ್ ರಾಜು ಅವರ ವಿಡಿಯೋಗಳನ್ನು ಮಾಧ್ಯಮವೊಂದಕ್ಕೆ ಪ್ರತಿ ವಿಡಿಯೋವನ್ನು 5–6 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ರೀತಿ ವಿಡಿಯೋಗಳನ್ನು ಮಾರಾಟ ಮಾಡುತ್ತಿರುವುದು ದೃಶ್ಯ ಮಾಧ್ಯಮ ಲೋಕಕ್ಕೆ ಹೊಸದೇನಲ್ಲ. ಇಂತಹ ರೋಚಕ ದೃಶ್ಯಗಳ ವಿಡಿಯೋಗಳನ್ನು ಸುದ್ದಿ ವಾಹಿನಿಗಳು ಹಣ ತೆತ್ತು ಖರೀದಿ ಮಾಡುತ್ತವೆ. ಈ ಮೂಲಕ ತಮ್ಮ ಟಿಆರ್ ಪಿಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತವೆ.
ಹೈದರ್ ಆಲಿ ಪ್ರಕಣದ ಆರೋಪಿಯನ್ನು ನಯಾಜ್ ಪಾಷಾ ಆಲಿಯಾಸ್ ನಜು ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಎಂಟು ಮೊಕದ್ದಮೆಗಳು ದಾಖಲಾಗಿವೆ. ಬೆಂಗಳೂರಿನ ನಿವಾಸಿಗಳಾದ ದರ್ಶನ್ , ರಹೀದ್ ಮತ್ತು ವಾಸೀಮ್ ಮತ್ತು ಶಿವಮೊಗ್ಗ ರೌಡಿ ಶೀಟರ್ ರಿಜ್ವಾನ್ ಮತ್ತು ಮಟೀನ್ ಮತ್ತು ಸದ್ದಾಂ ಇದೇ ಜೈಲಿನಲ್ಲಿದ್ದಾರೆ. ಹೈದರ್ ಆಲಿಯನ್ನು ಫೆಬ್ರವರಿಯಲ್ಲಿ ಕೊಲೆ ಮಾಡಲಾಗಿತ್ತು. ಇವರಲ್ಲಿ ಯಾರು ವಿಡಿಯೋವನ್ನು ಚಿತ್ರೀಕರಿಸಿದ್ದು ಎಂಬ ಮಾಹಿತಿಯನ್ನು ಮೂಲಗಳು ಬಿಟ್ಟುಕೊಟ್ಟಿಲ್ಲ ಆದರೆ ಇವರಲ್ಲಿ ಒಬ್ಬ ವಿಡಿಯೋ ಮಾಡಿದ್ದಾನೆ ಎಂದಷ್ಟೇ ಹೇಳಲಾಗುತ್ತಿದೆ.
ಉಮೇಶ್ ರೆಡ್ಡಿ ವಿಡಿಯೋ:
ವಿಕೃತ ಕಾಮಿ ಉಮೇಶ್ ರೆಡ್ಡಿ ವಿಡಿಯೋವನ್ನು ಪವನ್ ಎಂಬಾತ ಚಿತ್ರೀಕರಿಸಿದ್ದಾನೆ ಎಂದು ಸಿಸಿಬಿ ಮೂಲಗಳು ಹೇಳಿವೆ. ಸರಣಿ ರೇಪಿಸ್ಟ್, ಹಂತಕ, ಉಮೇಶ್ ರೆಡ್ಡಿಗೆ 30 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ರೆಡ್ಡಿ ಕರ್ನಾಟಕ, ಮಹಾರಾಷ್ಟ್ರ ಗುಜರಾತ್ ನಲ್ಲಿ 18 ಕೊಲೆ ಮತ್ತು 20 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ 2022 ರಲ್ಲಿ 30 ವರ್ಷಗಳ ಜೀವಾವಧಿ ಶಿಕ್ಷೆಗೆ ಮಾರ್ಪಾಟು ಮಾಡಿತ್ತು.
ಧನ್ವೀರ್ ಅಣತಿಯಂತೆ ಪವನ್ ಈ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ದರ್ಶನ್ ಅವರಿಗೆ ಜೈಲಿನಲ್ಲಿ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಿದ್ದಕ್ಕಾಗಿ ಬಂಧೀಖಾನೆ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಈ ತಂತ್ರ ಹೂಡಿದ್ದಾನೆ ಎಂದು ಹೇಳಲಾಗುತ್ತಿದೆ.
ದರ್ಶನ್ ಗೆ ಸುಮಾರು ಒಂದು ತಿಂಗಳ ಕಾಲ ಯಾವುದೇ ಸೌಕರ್ಯಗಳನ್ನು ಒದಗಿಸಿರಲಿಲ್ಲ. ನಂತರ ಕೋರ್ಟ್ ಆದೇಶದ ಮೇರೆಗೆ ದರ್ಶನ್ ಗೆ ಹಾಸಿಗೆ ಮತ್ತು ಮನೆಯೂಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

