ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶವು ಡಿ. 1ರಿಂದ 19ರವರೆಗೆ ನಡೆಯಲಿದೆ. ಆದರೆ ಅಧಿವೇಶನವನ್ನು ಕೇವಲ 15 ಕೆಲಸದ ದಿನಗಳಿಗೆ ಸೀಮಿತಗೊಳಿಸಿರುವುದಕ್ಕೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಈ ಅಧಿವೇಶನದಲ್ಲಿ ಒಟ್ಟು 15 ದಿನ ಕಲಾಪ ನಡೆಯಲಿದೆ ಎಂದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಡಿ 1ರಿಂದ 19ರವರೆಗೆ ಚಳಿಗಾಲದ ಅಧಿವೇಶನ ನಡೆಸುವ ಕೇಂದ್ರದ ಪ್ರಸ್ತಾವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿ ನೀಡಿದ್ದಾರೆ ಎಂದು ಸಚಿವ ರಿಜಿಜು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಸರ್ಕಾರದ ವಿರುದ್ಧ ಕಿಡಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಅಧಿವೇಶನವು ಕೇವಲ 15 ದಿನಗಳಲ್ಲಿ ಕೊನೆಗೊಳ್ಳಲಿದೆ. ಅಧಿವೇಶನಕ್ಕೆ ಸರಕಾರದ ನಿರಾಸಕ್ತಿ, ಯಾವುದೇ ಮಸೂದೆ ಮಂಡನೆ ಇಲ್ಲದಿರುವುದು ಮತ್ತು ಯಾವುದೇ ಚರ್ಚೆಗೆ ಅವಕಾಶವಿಲ್ಲ ಎನ್ನುವ ಧೋರಣೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.
ಟಿಎಂಸಿ ಮುಖಂಡ ಡೆರೆಕ್ ಒಬ್ರಯಾನ್ ಸರ್ಕಾರಕ್ಕೆ ‘ಪಾರ್ಲಿಮೆಂಟ್ ಒಫೋಬಿಯಾ’ ಸಮಸ್ಯೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅಧಿವೇಶನದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ವಾಪಕ ಚರ್ಚೆ ನಡೆಯುವ ನಿರೀಕ್ಷೆ ಇದೆ. ಕಳೆದ ಮುಂಗಾರು ಅಧಿವೇಶನದಲ್ಲೂ ಬಿಹಾರದಲ್ಲಿ ಕೈಗೊಂಡಿದ್ದ ಎಸ್‌ಐಆರ್ ಕುರಿತು ವ್ಯಾಪಕ ವಿರೋಧ, ಪ್ರತಿಭಟನೆ ವ್ಯಕ್ತವಾಗಿತ್ತು.
ನ. 14ರಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಯಾರೇ ಗೆಲುವು ಸಾಧಿಸಿದರೂ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಇನ್ನು ಭಾರತದೊಂದಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿ ಪ್ರಧಾನಿ ಮೋದಿ ಜತೆ ಮಾತನಾಡಿ ಯುದ್ಧ ನಿಲ್ಲಿಸಿದ್ದಾಗಿ ಪದೇ ಪದೇ ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತೂ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿವೆ.

