ಕೊಪ್ಪಳ: 2028ರವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಇರುವುದಿಲ್ಲ; ಆ ನಂತರ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಅಭಿಲಾಷೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಪಕ್ಷ ಸೂಚಿಸಿದರೆ ನಾನೂ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದೂ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುವುದು ಸಹಜ. ಡಿಸಿಎಂ ಶಿವಕುಮಾರ್ ಅವರ ಅಭಿಮಾನಿಗಳು ಅಸೆ ಇಟ್ಟುಕೊಂಡಿರುವುದು ತಪ್ಪೇನಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದ್ದು, 2028 ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ನಂತರ ಯಾರು ಮುಖ್ಯಮಂತ್ರಿ ಆಗಬೇಕು ಎಂದು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಸಧ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಖಾಲಿ ಇಲ್ಲ ಎಂದಿದ್ದಾರೆ.
ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ನಡೆಯುವುದಿಲ್ಲ. ಕ್ರಾಂತಿ ಎನ್ನುವುದು ಬಿಜೆಪಿ ಸೃಷ್ಟಿ. ಶಿವಕುಮಾರ್ ದೈವಭಕ್ತರು. ಅವರು ಮೊದಲಿನಿಂದಲೂ ದೇವರ ದರ್ಶನ ಪಡೆಯುತ್ತಾ ಬಂದಿದ್ದಾರೆ. ಅವರು ದೇವಸ್ಥಾನಕ್ಕೆ ಹೋಗುವುದಕ್ಕೂ ಮುಖ್ಯಮಂತ್ರಿ ಸ್ಥಾನದ ಪೈಪೋಟಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಆಗಬಹುದು. ಪಕ್ಷ ಸೂಚಿಸಿದರೆ ನಾನೂ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧನಿದ್ದೇನೆ. ಪಕ್ಷದ ಕೆಲಸ ಮಾಡುತ್ತೇನೆ ಎಂದ ಅವರು, ಬಿಜೆಪಿಯಲ್ಲಿ ಮೊದಲು ಎರಡು ಗುಂಪುಗಳಷ್ಟೇ ಇದ್ದವು. ಈಗ ಬಿ.ವೈ. ವಿಜಯೇಂದ್ರ, ಆರ್. ಅಶೋಕ, ಬಸನಗೌಡ ಪಾಟೀಲ ಯತ್ನಾಳ, ಕೆ.ಎಸ್. ಈಶ್ವರಪ್ಪ ಹೀಗೆ ಹಲವು ಗುಂಪುಗಳಾಗಿವೆ. ಬಿಜೆಪಿ ಮುಖಂಡರು ಮೊದಲು ತಮ್ಮ ಪಕ್ಷದ ಗೊಂದಲ ಬಗೆಹರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

