ದೆಹಲಿಯಲ್ಲಿ  ನಾಳೆಯ ಕರ್ನಾಟಕದ ಹೋರಾಟ ನ್ಯಾಯವೇ?

Most read

ತೆರಿಗೆ ಪಾಲಿನಲ್ಲೂ ಅನ್ಯಾಯ, ಜಿಎಸ್  ಟಿ ನಷ್ಟಕ್ಕೂ ಪರಿಹಾರವಿಲ್ಲ, ಅನುದಾನಗಳು ಗ್ಯಾರಂಟಿಯಿಲ್ಲ. ಎನ್ ಡಿ ಆರ್ ಎಫ್ ಅನುದಾನವೂ ಅಪರ್ಯಾಪ್ತ, ಸೆಸ್ ಮತ್ತು ಸರ್ಚಾರ್ಜ್ ನಲ್ಲಿ ಪಾಲಿಲ್ಲ. ಈ ಎಲ್ಲ ಅನ್ಯಾಯಗಳನ್ನು ರಾಜ್ಯವು ಸಹಿಸುತ್ತಲೇ ಕೂರಬೇಕೇ? – ಶ್ರೀನಿವಾಸ ಕಾರ್ಕಳ

ಅಳದ ಮಗುವಿಗೆ ಹಾಲಿಲ್ಲ’ ಎಂಬ ಗಾದೆ ಮಾತೊಂದು ನಮ್ಮಲ್ಲಿ ರೂಢಿಯಲ್ಲಿದೆ. ಹಾಲು ಬೇಕೆಂದು ಮಗು ಅತ್ತರೆ, ಆ ಮೂಲಕ ಒತ್ತಾಯಿಸಿದರೆ ಮಾತ್ರ ತಾಯಿ ಹಾಲೂಡುತ್ತಾಳೆ ಎನ್ನುವುದು ಇದರ ತಾತ್ಪರ್ಯ. ಇದು ತಾಯಿ ಮಗುವಿನ ಸಂಬಂಧದಲ್ಲಿ ಎಲ್ಲ ಕಾಲಕ್ಕೂ ಸತ್ಯವಾಗಬೇಕಿಲ್ಲ. ಆದರೆ, ನಿತ್ಯ ಬದುಕಿನಲ್ಲಿ ಹಕ್ಕಿನ ಪ್ರಶ್ನೆ ಬಂದಾಗ ಈ ಮಾತು ಬಹುಮಟ್ಟಿಗೆ ಸೂಕ್ತವೆನಿಸುತ್ತದೆ.

ನಮ್ಮ ಸಂವಿಧಾನವೇ ನಮಗೆ ಅನೇಕ ಹಕ್ಕುಗಳನ್ನು ಕೊಟ್ಟಿದೆ. ಆದರೆ ನಾವು ಸುಮ್ಮನೆ ಕುಳಿತರೆ ಆ ಹಕ್ಕುಗಳು ನಮಗೆ ದಕ್ಕಬೇಕಾಗಿಲ್ಲ; ದಕ್ಕುವುದಿಲ್ಲ. ಆ ಹಕ್ಕುಗಳ ಬಗ್ಗೆ ನಾವು ಸದಾ ಎಚ್ಚರಿರಬೇಕು ಮತ್ತು ಅದು ಸಿಗದೆ ಹೋದಾಗ ಅದಕ್ಕೆ ಹಕ್ಕೊತ್ತಾಯವನ್ನೂ ಮಾಡಬೇಕು. ಈ ಹಕ್ಕೊತ್ತಾಯದ ಹೋರಾಟ ನಮ್ಮಲ್ಲಿ ಈಗಲ್ಲ, ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಯಾಕೆಂದರೆ ಹಾಲು ಸಿಗಬೇಕಾದರೆ ಅಳಲೇ ಬೇಕಲ್ಲ?

ಇದನ್ನು ಯಾಕೆ ಹೇಳಬೇಕಾಯಿತೆಂದರೆ ದಕ್ಷಿಣದ ರಾಜ್ಯಗಳು ದೇಶದ ಬೊಕ್ಕಸಕ್ಕೆ ಬಹುದೊಡ್ಡ ಪಾಲನ್ನು ನೀಡುತ್ತಿದ್ದರೂ, ಪ್ರತಿಯಾಗಿ ಅವಕ್ಕೆ ನ್ಯಾಯವಾಗಿ ಸಿಗತಕ್ಕ ಪಾಲು ಸಿಗುತ್ತಿಲ್ಲ. ಅದರಲ್ಲೂ ಕರ್ನಾಟಕಕ್ಕೆ ಈ ವಿಷಯದಲ್ಲಿ ಬಹಳ ಅನ್ಯಾಯವಾಗುತ್ತಿದೆ. ಇದನ್ನು ನಿನ್ನೆ ಕರ್ನಾಟಕದ ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾಳೆ (07-02-2024) ದೆಹಲಿಯಲ್ಲಿ ಈ ಸಂಬಂಧ ಕರ್ನಾಟಕದ ಶಾಸಕರು ಮಂತ್ರಿಗಳಿಂದ ಹೋರಾಟ ನಡೆಯಲಿದೆ. ಇದರ ಕಾರಣವೇನು, ಆರ್ಥಿಕವಾಗಿ ಹೇಗೆ ಅನ್ಯಾಯವಾಗುತ್ತಿದೆ ಎನ್ನುವುದನ್ನು ಸ್ಥೂಲವಾಗಿ ನೋಡೋಣ.

ದಕ್ಷಿಣದ ರಾಜ್ಯಗಳಿಗೆ ಅನ್ಯಾಯ

ಮೊನ್ನೆ ಮೊನ್ನೆಯಷ್ಟೇ ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ತೆರಿಗೆ ನಿಧಿಯಿಂದ ಯಾವ ಯಾವ ರಾಜ್ಯಗಳಿಗೆ ಎಷ್ಟು ಪಾಲು ಕೊಡಲಾಗುತ್ತದೆ ಎನ್ನುವುದನ್ನುಬಹಿರಂಗ ಪಡಿಸಿದ್ದಾರೆ. ಗರಿಷ್ಠ ತೆರಿಗೆ ಪಾಲು ಪಡೆಯುವ ಆ ಪಟ್ಟಿಯ ಮೊದಲ ಏಳು ಸ್ಥಾನಗಳಲ್ಲಿ ದಕ್ಷಿಣದ ಒಂದು ರಾಜ್ಯವೂ ಇಲ್ಲ. ಆದರೆ ದೇಶದ ಖಜಾನೆಗೆ ಗರಿಷ್ಠ ತೆರಿಗೆ ಸಂಗ್ರಹಿಸಿ ಕೊಡುವ ದೇಶದ ಮೊದಲ ಐದು ರಾಜ್ಯಗಳಲ್ಲಿಯೇ ದಕ್ಷಿಣದ ಎರಡು ರಾಜ್ಯಗಳಿವೆ. ಅವೆಂದರೆ ಕರ್ನಾಟಕ ಮತ್ತು ತಮಿಳುನಾಡು.

ದಕ್ಷಿಣದ ಐದು ರಾಜ್ಯಗಳು ಅಂದರೆ ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ‍್ರಪ್ರದೇಶ ಇವು ಒಟ್ಟಾಗಿ ಎಷ್ಟು ಹಣ ಪಡೆಯುತ್ತವೆಯೋ ಅದಕ್ಕಿಂತ 26 ಸಾವಿರ ಕೋಟಿ ರುಪಾಯಿ ಹೆಚ್ಚು ಹಣವನ್ನು ಉತ್ತರಪ್ರದೇಶ ರಾಜ್ಯವೊಂದೇ ಪಡೆಯುತ್ತದೆ!

ಯಾವ ರಾಜ್ಯಕ್ಕೆ ಎಷ್ಟು ಹಣವನ್ನು ಕೊಡಬೇಕು ಎನ್ನುವುದನ್ನು ನಿರ್ಧರಿಸುವ ಮಾನದಂಡಗಳಲ್ಲಿ ಆ ರಾಜ್ಯದ ವಿಸ್ತೀರ್ಣವೂ ಒಂದು. ಇಲ್ಲೂ ಗಮನಿಸತಕ್ಕ ಸಂಗತಿಯೆಂದರೆ – ದಕ್ಷಿಣದ ಐದು ರಾಜ್ಯಗಳ ಒಟ್ಟು  ವಿಸ್ತೀರ್ಣವು ಉತ್ತರಪ್ರದೇಶ ರಾಜ್ಯಕ್ಕಿಂತ 3.92 ಲಕ್ಷ ಚದರ ಕಿಲೋಮಿಟರ್ ಹೆಚ್ಚು ಇದೆ. ತೆರಿಗೆ ಪಾಲು ನಿರ್ಧರಿಸುವ ಇನ್ನೊಂದು ಮಾನದಂಡವೆಂದರೆ ಜನಸಂಖ್ಯ. ಇದರಲ್ಲೂ (2011ರ ಜನಗಣತಿ) ಈ ಐದು ರಾಜ್ಯಗಳ ಒಟ್ಟು ಜನಸಂಖ್ಯೆಯು ಉತ್ತರಪ್ರದೇಶದ ಜನಸಂಖ್ಯೆಗಿಂತ 2.5 ಕೋಟಿ ಹೆಚ್ಚು ಇದೆ. ಹೀಗಿರುವಾಗಲೂ ಉತ್ತರ ಪ್ರದೇಶಕ್ಕೆ ಬೆಣ್ಣೆ ದಕ್ಷಿಣದ ರಾಜ್ಯಗಳಿಗೆ ಸುಣ್ಣ!

15 ನೇ ಹಣಕಾಸಿನ ಆಯೋಗವು ಕರ್ನಾಟಕಕ್ಕೆ ಆಗುವ ತೆರಿಗೆ ಹಂಚಿಕೆ ನಷ್ಟವನ್ನು ಸರಿದೂಗಿಸಲು 6000 ಕೋಟಿ ರುಪಾಯಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಅದಕ್ಕೆ ಒಕ್ಕೂಟ ಸರಕಾರ ಒಪ್ಪಿಕೊಂಡಿಲ್ಲ. ಈ ಸಂಬಂಧ ಬಿಡಿಗಾಸನ್ನೂ ಕರ್ನಾಟಕಕ್ಕೆ ಕೊಟ್ಟಿಲ್ಲ.

ದೇಶದ ಬೊಕ್ಕಸಕ್ಕೆ ದೊಡ್ಡ ಕೊಡುಗೆ ನೀಡುವ ತಮಿಳುನಾಡಿಗೆ 15 ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಸಿಗುವುದು ಒ ಟ್ಟು ತೆರಿಗೆ ಹಂಚಿಕೆಯ 4.07%. ಇದು 12 ನೇ ಹಣಕಾಸು ಅಯೋಗದ ಪ್ರಕಾರ 5.30% ಇತ್ತು. 2015-2022 ರ ನಡುವೆ ತಮಿಳುನಾಡು ಕೊಟ್ಟದ್ದು 5.16 ಲಕ್ಷ ಕೋಟಿ. ಅದಕ್ಕೆ ಸಿಕ್ಕಿದ್ದು 2.08 ಕೋಟಿ ರುಪಾಯಿ ಮಾತ್ರ. ಅದೇ ಹೊತ್ತಿನಲ್ಲಿ ಉತ್ತರ ಪ್ರದೇಶ 2.24 ಕೋಟಿ ರುಪಾಯಿ ಕೊಟ್ಟು 9.04 ಕೋಟಿ ರುಪಾಯಿ ಪಡೆದುಕೊಂಡಿತು.

15 ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ತೆಲಂಗಾಣ ಕೂಡಾ ಪಡೆದ ಪಾಲು 2.4% ರಿಂದ 2.1% ಕ್ಕೆ ಇಳಿಕೆ ಕಂಡಿತು. ಆಂಧ್ರಪ್ರದೇಶ 4.31% ರಿಂದ 4.04%, ಕೇರಳ 3.8% ರಿಂದ 1.9% (10 ಮತ್ತು 15 ನೇ ಹಣಕಾಸು ಆಯೋಗದ ನಡುವೆ). ಇಲ್ಲೂ ಆರ್ಥಿಕ ಶಿಸ್ತು ಕಾಪಾಡಲು ಸಾಧ್ಯವಾಗದ ಕಾರಣಕ್ಕೆ ಕೇರಳ ಮತ್ತು ಆಂಧ‍್ರಕ್ಕೆ ಅದನ್ನು ಸರಿದೂಗಿಸಲು ಅನುದಾನ ಸಿಕ್ಕಿದೆ. ಆದರೆ ಕರ್ನಾಟಕವು ಆರ್ಥಿಕ ಹೊಣೆಗಾರಿಕೆ ಪಾಲಿಸಿಯೂ ಅದಕ್ಕೆ ಯಾವ ಅನುದಾನವೂ ಸಿಕ್ಕಿಲ್ಲ. ಅಂದರೆ ಅಶಿಸ್ತಿನವರಿಗೆ ಸಹಾಯ ಮತ್ತು ಶಿಸ್ತು ಪಾಲಿಸಿದವರಿಗೆ ಶಿಕ್ಷೆ?!

ಬಿಜೆಪಿಯ ವಿಚಿತ್ರ ವಾದ

ಕರ್ನಾಟಕದಲ್ಲಿ ಬಿಜೆಪಿಯ  ಮತ್ತು ಬಿಜೆಪಿ ಬೆಂಬಲಿತ ಸೇರಿದರೆ ಒಟ್ಟು 27 ಸಂಸದರಿದ್ದಾರೆ. ಆದರೆ ಅವರು ಕರ್ನಾಟಕದ ಪರವಾಗಿ ಮಾತನಾಡುವ ಬದಲು ಕೇಂದ್ರದ ಪರ, ಅಂದರೆ ಪರೋಕ್ಷವಾಗಿ ಕರ್ನಾಟಕದ ವಿರುದ್ಧ ಮಾತನಾಡುತ್ತಿದ್ದಾರೆ! ಇದು ಕೇರಳ ಮತ್ತು ತಮಿಳುನಾಡಿನ ಸಂಸದರ ವರ್ತನೆಗೆ ತೀರಾ ವ್ಯತಿರಿಕ್ತ. ಅಲ್ಲಿ ನಾಡಿನ ಹಿತಾಸಕ್ತಿಯ ವಿಷಯ ಬಂದಾಗ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಂದಾಗುತ್ತಾರೆ.

ಕರ್ನಾಟಕದ ಬಿಜೆಪಿ ಸಂಸದರ ವಾದ ಏನೆಂದರೆ 2014 ರ ಬಳಿಕ ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಭಾರೀ ಹೆಚ್ಚಳವಾಗಿದೆ. ಎಷ್ಟು ಹೆಚ್ಚೆಂದರೆ 254% ಎನ್ನುತ್ತಾರೆ ಅವರು. ಆದರೆ ಇದೇ ಹೊತ್ತಿನಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತಿರುವ ತೆರಿಗೆ ಪ್ರಮಾಣದಲ್ಲಿಯೂ ಭಾರೀ ಹೆಚ್ಚಳವಾಗಿರುವುದನ್ನು ಅವರು ಉಲ್ಲೇಖಿಸುವುದಿಲ್ಲ. ಈ ಅನುಪಾತವನ್ನು ತೆಗೆದುಕೊಂಡರೆ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದೇ ಹೆಚ್ಚು.

ಸಂಸ್ಥೆಯೊಂದು ಲೆಕ್ಕ ಹಾಕಿದ ಪ್ರಕಾರ 2016 ಮತ್ತು 2017 ರ ನಡುವೆ ಕೆಲ ರಾಜ್ಯಗಳು ಕೇಂದ್ರ ಬೊಕ್ಕಸಕ್ಕೆ ಕೊಡುವ 100 ರುಪಾಯಿಗೆ ಕೇಂದ್ರದಿಂದ ಅವುಗಳಿಗೆ ವಾಪಸ್ ಬರುತ್ತಿದ್ದ ಪಾಲು ಎಷ್ಟು ಎಂಬ ವಿವರ ಹೀಗಿದೆ. ತೆಲಂಗಾಣ 70 ರುಪಾಯಿ, ಆಂಧ್ರಪ್ರದೇಶ 68 ರುಪಾಯಿ, ಕೇರಳ 52 ರುಪಾಯಿ, ಕರ್ನಾಟಕ 36 ರುಪಾಯಿ, ತಮಿಳುನಾಡು 29 ರುಪಾಯಿ. ಆದರೆ ಉತ್ತರಪ್ರದೇಶ – 273 ರುಪಾಯಿ, ಬಿಹಾರ- 706 ರುಪಾಯಿ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ ಎಲ್ಲ ಪ್ರಜ್ಞಾವಂತರೂ ಹೇಳುವಂತೆ ಇದು ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಪ್ರಶ್ನೆಯಲ್ಲ. ನಾವು ಕೊಟ್ಟ ನೂರು ರುಪಾಯಿಗೆ ನೂರು ರುಪಾಯಿ ವಾಪಸ್ ಬರಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಬಡ ರಾಜ್ಯಗಳಿಗೆ ಶ್ರೀಮಂತ ರಾಜ್ಯಗಳು ಸಹಾಯ ಮಾಡಲೇಬೇಕು. ಅದು ಮಾನವೀಯತೆ. ಆದರೆ ರಾಜ್ಯವೊಂದು ಉತ್ತಮ ನಿರ್ವಹಣೆ ಮಾಡಿದ್ದಕ್ಕೆ ಆ ರಾಜ್ಯಕ್ಕೆ ಶಿಕ್ಷೆಯಾಗಬಾರದು ಅಲ್ಲವೇ? ತಾರತಮ್ಯ ಆಗಬಾರದು ಅಲ್ಲವೇ?

ಜಿಎಸ್ ಟಿ ವ್ಯವಸ್ಥೆ ಬಂದಮೇಲೆ ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಅವಕಾಶ ತೀರಾ ಕುಗ್ಗಿದೆ. ಜಿಎಸ್ ಟಿಯಿಂದ ಆಗುವ ನಷ್ಟವನ್ನು ಸರಿದೂಗಿಸುವ ಅವಧಿಯೂ ಈಗ ಮುಗಿದುಹೋಗಿದೆ.

ಸೆಸ್ ಮತ್ತು ಸರ್ಚಾರ್ಜ್

ಇಲ್ಲಿ ರಾಜ್ಯಗಳ ಅಸಮಾಧಾನಕ್ಕೆ ಕಾರಣವಾಗಿರುವ ಇನ್ನೂ ಒಂದು ಮುಖ್ಯ ವಿಷಯವೆಂದರೆ ಸೆಸ್ ಮತ್ತು ಸರ್ಚಾರ್ಜ್ (ತೆರಿಗೆಯ ಮೇಲಣ ತೆರಿಗೆಯೇ ಸೆಸ್. 50 ಲಕ್ಷಕ್ಕಿಂತ ಹೆಚ್ಚು ವರಮಾನದವರಿಗೆ ಹಾಕುವ ತೆರಿಗೆಯೇ ಸರ್ಚಾರ್ಜ್). ಈ ಎರಡನ್ನೂ ರಾಜ್ಯಗಳಿಂದ ಸಂಗ್ರಹಿಸಲಾಗುತ್ತದೆಯಾದರೂ ಇದರಲ್ಲಿ ರಾಜ್ಯಗಳಿಗೆ ಪಾಲಿಲ್ಲ! ಅದು ತೆರಿಗೆ ಹಂಚಿಕೆಯ ಮುಖ್ಯ ನಿಧಿಗೆ ಹೋಗುವುದಿಲ್ಲ ಅದನ್ನು ಕೇಂದ್ರವೇ ಇರಿಸಿಕೊಳ್ಳುತ್ತದೆ. ಇದು ಯಾವ ನ್ಯಾಯ?

2018-23 ರ ನಡುವೆ ಸೆಸ್ ಮತ್ತು ಸರ್ಚಾರ್ಜ್ 133% ಹೆಚ್ಚಿದೆ. ಕರ್ನಾಟಕ ಸರಕಾರವೇ ಅಂದಾಜಿಸಿದ ಪ್ರಕಾರ ಕೇಂದ್ರ ಸರಕಾರವು ಈ ಅವಧಿಯಲ್ಲಿ 5.2 ಲಕ್ಷ ಕೋಟಿ ರುಪಾಯಿ ಸಂಗ್ರಹಿಸಿದೆ. ಇದರಲ್ಲಿ ರಾಜ್ಯಗಳಿಗೆ ಯಾವ ಪಾಲೂ ಇಲ್ಲ! ಇದನ್ನು ರಾಜ್ಯಗಳಿಗೆ ಕೊಡುವ ಯೋಜನೆಗಳಿಗೆ ವಿನಿಯೋಗಿಸುತ್ತಿದ್ದೇವೆಯೆಂದು ಕೇಂದ್ರ ಸರಕಾರ ಹೇಳುತ್ತಿದೆಯಾದರೂ ಅದರ ಹೆಸರು ಪಡೆಯುವುದು ಯಾರು? ಪಡಿತರ ಸಹಿತ ಅನೇಕ ಯೋಜನೆಗಳಲ್ಲಿ ಫೋಟೋ ಇರುವುದು ಯಾರದ್ದು? ಇದನ್ನು ಬಿಡಿಸಿ ಹೇಳಬೇಕೇ?

ಕರ್ನಾಟಕವು ನೆರೆ ಮತ್ತು ಬರದಿಂದ ತತ್ತರಿಸಿದಾಗಲೂ ಕೇಂದ್ರ ನ್ಯಾಯವಾಗಿ ಮಾಡಬೇಕಾದ ಸಹಾಯವನ್ನುಮಾಡಲಿಲ್ಲ. ಈಗಿನ ಭೀಕರ ಬರ ಸಮಸ್ಯೆಗೆ 18,177 ಕೋಟಿ ರುಪಾಯಿ ಹಣದ ಬೇಡಿಕೆ ಇರಿಸಲಾಗಿದೆಯಾದರೂ ಬಿಡಿಗಾಸನ್ನೂ ಒಕ್ಕೂಟ ಸರಕಾರ ಕೊಟ್ಟಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯದಿಂದ 62,098 ಕೋಟಿ ನಷ್ಟವಾಗಿದೆ (ಐದು ವರ್ಷಗಳಲ್ಲಿ).  ಭದ್ರಾ ಮೇಲ್ದಂಡೆಗೆ 5,300 ಕೋಟಿ ಘೋಷಿಸಿ ಕೊಟ್ಟದ್ದು ಸೊನ್ನೆ. ಸಹಭಾಗಿತ್ವ ಯೋಜನೆಗೆ ಅನುದಾನ ಕಡಿತದಿಂದ ಕ್ರಮವಾಗಿ 20,000 ಕೋಟಿ (2021-22), 13,000 ಕೋಟಿ (2022-23) ನಷ್ಟ. ಕಾಗದದಲ್ಲೇ ಉಳಿದ ಏಮ್ಸ್, ಮಹದಾಯಿ ಯೋಜನೆಗೆ ಮನ್ನಣೆ ಇಲ್ಲ. ಈ ಎಲ್ಲ ಕಾರಣದಿಂದ ಆದ ಒಟ್ಟು ನಷ್ಟ 1,87,000 ಕೋಟಿ ಎನ್ನುತ್ತದೆ ಕರ್ನಾಟಕ ಸರಕಾರ.

ಒಟ್ಟಿನಲ್ಲಿ, ತೆರಿಗೆ ಪಾಲಿನಲ್ಲೂ ಅನ್ಯಾಯ, ಜಿಎಸ್  ಟಿ ನಷ್ಟಕ್ಕೂ ಪರಿಹಾರವಿಲ್ಲ, ಅನುದಾನಗಳು ಗ್ಯಾರಂಟಿಯಿಲ್ಲ. ಎನ್ ಡಿ ಆರ್ ಎಫ್ ಅನುದಾನವೂ ಅಪರ್ಯಾಪ್ತ, ಸೆಸ್ ಮತ್ತು ಸರ್ಚಾರ್ಜ್ ನಲ್ಲಿ ಪಾಲಿಲ್ಲ. ಈ ಎಲ್ಲ ಅನ್ಯಾಯಗಳನ್ನು ರಾಜ್ಯವು ಸಹಿಸುತ್ತಲೇ ಕೂರಬೇಕೇ? ಇಂಡಿಯಾವು ಯೂನಿಯನ್ ಆಫ್ ಸ್ಟೇಟ್ಸ್ ಎಂದು ಸಂವಿಧಾನ ಹೇಳುತ್ತದೆ. ರಾಜ್ಯಗಳಿಂದಲೇ ದೇಶ. ಹೀಗಿರುವಾಗ ಭೇದವೆಣಿಸದೆ ಎಲ್ಲ ರಾಜ್ಯಗಳನ್ನು ನ್ಯಾಯ ಸಮ್ಮತ ರೀತಿಯಲ್ಲಿ ನೋಡಿಕೊಳ್ಳುವುದು ಒಕ್ಕೂಟ ಸರಕಾರದ ಹೊಣೆಯಲ್ಲವೇ? ಹೀಗೆ ನ್ಯಾಯ ಸಮ್ಮತ ರೀತಿಯಲ್ಲಿ ನಡೆಸಿಕೊಳ್ಳದಿದ್ದಾಗ ಹೋರಾಟವಲ್ಲದೆ ಬೇರೆ ದಾರಿ ಯಾವುದಿದೆ?‌

ಇದನ್ನೂ ಓದಿ-ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ

ನೆನಪಿರಲಿ- ಇದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆಯಾಗಲೀ ಕರ್ನಾಟಕ ಸರಕಾರ ಮತ್ತು ಒಕ್ಕೂಟ ಸರಕಾರದ ನಡುವೆಯಾಗಲೀ ನಡೆಯುವ ಹೋರಾಟವಲ್ಲ. ಕರ್ನಾಟಕದ ಹಕ್ಕಿಗಾಗಿ, ಕರ್ನಾಟಕದ ಹಿತಾಸಕ್ತಿ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಹಾಗಾಗಿ ಪಕ್ಷಭೇದ ಮರೆತು ಇದರಲ್ಲಿ ಕನ್ನಡಿಗರು ಎನಿಸಿಕೊಂಡವರೆಲ್ಲರೂ ಪಾಲ್ಗೊಳ್ಳಲೇಬೇಕು.

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article