ಚಿಕ್ಕಬಳ್ಳಾಪುರದ ನಂದಿನಿ ಮಹಿಳೆಯರಿಗೆ ಮಾದರಿ; ಆಕೆಯ ಯಶೋಗಾಥೆಯ ಕಿರುನೋಟ ಹೀಗಿದೆ…

Most read

ಚಿಕ್ಕಬಳ್ಳಾಪುರ: ಪತಿ ಅನಾರೋಗ್ಯದಿಂದ ಅಕಾಲಿಕ ಮರಣಕ್ಕೀಡಾದ ಬಳಿಕ ಮನೆಯಲ್ಲಿ ಕೂರದೆ ಮಹಿಳೆಯೊಬ್ಬರು ವಾಹನ ಚಾಲನೆ ಕಲಿತು ಕಸ ಸಂಗ್ರಹಣೆಯ ಸ್ವಚ್ಛವಾಹಿನಿ ವಾಹನದ ಚಾಲಕಿಯಾಗಿ ದುಡಿಯುತ್ತಿರುವ ಮಹಿಳೆಯೊಬ್ಬರ ಯಶೋಗಥೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಈ ಮಹಿಳೆ ನಂದಿನಿ ಅವರ ಸಾಹಸವನ್ನು ಮೆಚ್ಚಿ ನಂದಿನಿ ಅವರು ಸಾವಿರಾರು ಮಹಿಳೆಯರಿಗೆ ಸ್ಫೂರ್ತಿ, ಸ್ವಚ್ಛತೆಯ ರಾಯಭಾರಿ ಎಂದು ಕೊಂಡಾಡಿದ್ದಾರೆ.

ಅನಿವಾರ್ಯತೆ ಮತ್ತು ಅವಕಾಶ ಮಹಿಳೆಯರ ಸಾಮರ್ಥ್ಯ ಹಾಗೂ ಮನೋಸ್ಥೈರ್ಯವನ್ನು ಸಾಬೀತುಪಡಿಸುವ ಎರಡು ಅಂಶಗಳು. ಬದುಕಿನ ಬಂಡಿಯನ್ನು ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಮಹಿಳೆಯರಿಗೆ ಪೂರಕ ಅವಕಾಶಗಳು ದೊರೆತಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬಲ್ಲರು. ಆರ್ಥಿಕವಾಗಿ ಸಶಕ್ತರಾಗಬಲ್ಲರು. ಇದಕ್ಕೆ ಉದಾಹರಣೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ನಂದಿನಿ.

ನಂದಿನಿ ಅವರು ತಿಪ್ಪೇನಹಳ್ಳಿ ಗ್ರಾಮದ ಪಂಚಾಯತಿಯಲ್ಲಿ ಕಸ ಸಂಗ್ರಹಣೆಯ ಸ್ವಚ್ಛವಾಹಿನಿ ವಾಹನದ ಚಾಲಕಿಯಾಗಿ ದುಡಿಯುತ್ತಿದ್ದಾರೆ. ಪತಿ ಅನಾರೋಗ್ಯದಿಂದ ಅಕಾಲಿಕ ಮರಣಕ್ಕೀಡಾದ ಬಳಿಕ ಅವರು ಕೈಚೆಲ್ಲಿ ಕೂರಲಿಲ್ಲ. ತನ್ನ ಹಾಗೂ ತಮ್ಮ ಎರಡು ಮಕ್ಕಳ ಭವಿಷ್ಯಕ್ಕಾಗಿ ದುಡಿಮೆಯ ದಾರಿಗಳನ್ನು ಹುಡುಕಿದರು. ದುಡಿಯುವ ದಿಟ್ಟತನ, ಕಲಿಯುವ ಛಲ ಅವರ ಕೈಗೆ ಸ್ಟೀರಿಂಗ್ ಕೊಟ್ಟಿತು. ಅದು ಬದುಕಿಗೆ ಹೊಸ ದಿಕ್ಕು ನೀಡಿತು.

ನಂದಿನಿ ಅವರು ನಂದಾದೀಪ ಸ್ವಸಹಾಯ ಸಂಘದ ಸಹಾಯದಿಂದ ಚಾಲನಾ ತರಬೇತಿ ಪಡೆದಿದ್ದಾರೆ. ಸ್ವಚ್ಛವಾಹಿನಿ ಸಾರಥಿಯಾಗಿ, ಗ್ರಾಮ ಪಂಚಾಯತಿಯಿಂದ ಪ್ರತಿ ತಿಂಗಳು 10 ಸಾವಿರ ರೂ. ವೇತನವನ್ನು ಪಡೆಯುತ್ತಿದ್ದಾರೆ. ಅವರ ಯಶೋಗಾಥೆ ನಮಗೆ ಎರಡು ಆಯಾಮಗಳಲ್ಲಿ ಪ್ರೇರಣಾದಾಯಕವಾಗಿದೆ. ವೈಯಕ್ತಿಕ ಜೀವನದ ಆಘಾತಕ್ಕೆ ಅಂಜದೆ, ಇತರರಿಗೆ ಸ್ಫೂರ್ತಿಯಾಗುವಂತೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವುದು ಹಾಗೂ ಗ್ರಾಮದ ಸ್ವಚ್ಛತೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು.

ನಂದಿನಿ ಅವರು ಸಾವಿರಾರು ಮಹಿಳೆಯರಿಗೆ ಸ್ಫೂರ್ತಿ, ಸ್ವಚ್ಛತೆಯ ರಾಯಭಾರಿ ಎಂದು ಬಣ್ಣಿಸಿದ್ದಾರೆ.

More articles

Latest article