ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ರಾಜ್ಯ ನಾಯಕತ್ವ ಬದಲಾವಣೆ ಕುರಿತು ದಿನನಿತ್ಯ ಚರ್ಚೆಗಳು ನಡೆಯುತ್ತಿದ್ದು, ಈ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಪಡಿಸಿದರು.
ಸಿಎಂ ಕುರ್ಚಿ ಖಾಲಿ ಇಲ್ಲ. ಆದ್ದರಿಂದ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧನಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನ ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದು, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಅಹಿಂದ ನಾಯಕತ್ವಕ್ಕೂ, ಮುಖ್ಯಮಂತ್ರಿ ಹುದ್ದೆಗೂ ಯಾವುದೇ ಸಂಬಂಧವಿಲ್ಲ. ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಯಾರೊಬ್ಬರೂ ವಿರೋಧಿಸುವ ಅಗತ್ಯವೇ ಇಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಪದೇ ಪದೇ ವಿಮರ್ಶೆ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು. ಡಾ.ಯತೀಂದ್ರ ಅವರು ಮುಖ್ಯಮಂತ್ರಿ ಸ್ಥಾನ ಅಥವಾ ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ. 2028ರ ಚುನಾವಣೆ ಇನ್ನೂ ದೂರ ಇದೆ. ಆ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಯಾರನ್ನು ಏನು ಮಾಡಬೇಕು ಎಂದು ನಿರ್ಧರಿಸುತ್ತದೆ ಎಂದು ತಿಳಿಸಿದರು.
ಬಹುಶಃ ಯತೀಂದ್ರ ಅವರು ಅಹಿಂದ ನಾಯಕತ್ವವನ್ನು ಮಾನು ಮುನ್ನಡೆಸಬೇಕು ಎಂಬ ಅರ್ಥದಲ್ಲಿ ಹೇಳಿರಬಹುದು. ಅವರು ಹೇಳಿದಂತೆ ಅಹಿಂದ ನಾಯಕತ್ವ ಕುರಿತು ಸಮಯ ಸಂದರ್ಭ ನೋಡಿ ನಿರ್ಧಾರ ಕೈಗೊಳ್ಳುತ್ತೇನೆ. ಅಹಿಂದ ನಾಯಕತ್ವಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

