ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿಸೆಟ್ಟರ್ ಅವರಿಗೆ ಐದನಿ ಪ್ರಶಸ್ತಿ: ಹಂಸಲೇಖ ಘೋಷಣೆ

Most read

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿಸೆಟ್ಟರ್ ಅವರಿಗೆ ಐದನಿ ಎಂಟರ್‌ ಟೈನ್‌ ಮೆಂಟ್‌ ಜೀವಮಾನ ಸಾಧನೆಗಾಗಿ ಕೊಡಮಾಡುವ ಐದನಿ ಪ್ರಶಸ್ತಿಯನ್ನು  ಘೋಷಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ  ಐದನಿ ಎಂಟರ್‌ ಟೈನ್‌ ಮೆಂಟ್‌ ಅಧ್ಯಕ್ಷ, ಖ್ಯಾತ ಗೀತ ರಚನೆಕಾರ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಈ ಪ್ರಶಸ್ತಿಯನ್ನು ರವಿ ಕೋರಿಸೆಟ್ಟರ್ ಅವರಿಗೆ ಪ್ರಧಾನ ಮಾಡುತ್ತಿರುವುದಾಗಿ ಪ್ರಕಟಿಸಿದರು.

ನಂತರ ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿಸೆಟ್ಟರ್ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಕಾರಣಗಳನ್ನು ವಿವರಿಸಿದರು. ಐದು ಸಾವಿರ ವರ್ಷಗಳ ಹಿಂದೆಯೇ ಕಲ್ಲುಗಳಲ್ಲಿ ಸಪ್ತ ಸ್ವರಗಳನ್ನು ಗುರುತಿಸಿ ಅಂದಿನ ಕಾಲದಲ್ಲಿಯೇ ಸಂಗೀತ ಪ್ರವರ್ಧಮಾನದಲ್ಲಿತ್ತು ಎನ್ನವುದನ್ನು ಅವರು ಸಂಶೋಧನೆಗಳ ಮೂಲಕ ಪತ್ತೆಹಚ್ಚಿದ್ದಾರೆ. ಇಂದಿಗೂ ಅದರ ದಾಖಲೆಗಳಿವೆ ಎಂದರು.

ಪ್ರೊಫೆಸರ್ ರವಿ ಕೋರಿಸೆಟ್ಟರ್ ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞರು. ಇವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಬೇಕಿತ್ತು. ಆದರೆ ಅವರು ಸದಾ ಪ್ರಚಾರದಿಂದ ದೂರವಿರುವ ಅಂತರ್ಮುಖಿ ಎಂದು ಬಣ್ಣಿಸಿದರು. ಇದೇ ಕಾರಣಕ್ಕಾಗಿ ಅವರನ್ನು ಐದನಿ ಗುರುತಿಸಿದೆ ಎಂದರು.

ನವಂಬರ್‌ 14ರಂದು ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸೆಟ್ಟರ್‌ ಅವರಿಗೆ ಚಿನ್ನದ ಪದಕ ಪ್ರಧಾನ ಮಾಡುವ ಮೂಲಕ ಅವರನ್ನು ಪುರಸ್ಕರಿಸುವುದಾಗಿ ಹಂಸಲೇಖ ತಿಳಿಸಿದರು.

ಇತಿಹಾಸ ದರ್ಪಣ ಪತ್ರಿಕೆ ಸಂಪಾದಕ ಹಂ.ಗು.ರಾಜೇಶ್ ಮತ್ತು ಪತ್ರಕರ್ತ ಹರ್ಷಕುಮಾರ್‌ ಕುಗ್ವೆ ಅವರು ಕೋರಿಸೆಟ್ಟರ್‌ ಅವರನ್ನು ಪರಿಚಯಿಸಿ ಅವರ ಸಾಧನೆಗಳನ್ನು ವಿವರಿಸಿದರು.

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಹಿರಿಯ ಶೈಕ್ಷಣಿಕ ತಜ್ಞ ಪ್ರೊಫೆಸರ್ ರವಿ ಕೊರಿಸೆಟ್ಟರ್ ಭಾರತೀಯ ಪ್ಯಾಲಿಯೊಲಿಥಿಕ್ ಪುರಾತತ್ತ್ವ ಶಾಸ್ತ್ರಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಇತಿಹಾಸಪೂರ್ವ ಮಾನವರು ಮತ್ತು ಅವರ ಪರಿಸರಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಭೂ-ಪುರಾತತ್ವ ವಿಧಾನಗಳು ಮತ್ತು ವಿಧಾನಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಭಾರತದಲ್ಲಿ ಏಳು ಪುಸ್ತಕಗಳನ್ನು ಮತ್ತು ವಿದೇಶಗಳಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ಭಾರತದ ಪ್ರಮುಖ ವಿಜ್ಞಾನ ಪಾಕ್ಷಿಕ ಜರ್ನಲ್ ಕರೆಂಟ್‌ ಸೈನ್ಸ್‌ ಸಂಪಾದಕರಾಗಿದ್ದಾರೆ. ಇವರು 2010 ರಲ್ಲಿ ಕರ್ನಾಟಕದ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಹಲವಾರು ಪುರಾತನ ಪಳೆಯುಳಿಕೆಗಳನ್ನು ಕಾಣಬಹುದಾಗಿದೆ.

More articles

Latest article