ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ಪ್ರಕರಣದ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಇದೀಗ ಮುಕ್ತಾಯಗೊಂಡಿದ್ದು, ಆದೇಶ ಪ್ರಕಟವಾಗಬೇಕಿದೆ. ಹಾಗಾಗಿ ಈ ಪ್ರಕರಣ ಕುತೂಹಲ ಕೆರಳಿಸಿದೆ.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರು ವಿಚಾರಣೆ ನಡೆಸಿದ್ದು ವದ ಪ್ರತಿವಾದ ಅಲಿಸಿ ಆದೇಶವನ್ನು ಕಾಯ್ದಿರಿಸಿದ್ದಾರೆ.
ಯಡಿಯೂರಪ್ಪ ಪರ ವಕೀಲರ ವಾದವೇನು?
ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಹೊಸದಾಗಿ ಪ್ರಕರಣವನ್ನು ಪರಿಗಣಿಸಲು ಹೈಕೋರ್ಟ್ ಸೂಚಿಸಿತ್ತು. ಸಂತ್ರಸ್ತೆಯ ಹೇಳಿಕೆ ಹೊರತುಪಡಿಸಿ ಉಳಿದ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣಿಸಿಲ್ಲ. ಯಡಿಯೂರಪ್ಪ ಅವರ ಮನೆಯಲ್ಲಿದ್ದ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಿಲ್ಲ. ಆಡಿಯೋ ರೆಕಾರ್ಡಿಂಗ್ ಅನ್ನೂ ನ್ಯಾಯಾಲಯ ಪರಿಗಣಿಸಿಲ್ಲ ಎಂದರು.
ಇದು ರದ್ದುಪಡಿಸಬೇಕಾದ ಪ್ರಕರಣವೆಂದು ಮನವರಿಕೆಯಾಗಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ, ಪ್ರೊ.ರವಿವರ್ಮ ಕುಮಾರ್ ತಮ್ಮನ್ನು ಕೋಣೆಯೊಂದಕ್ಕೆ ಕರೆದೊಯ್ದು ಕೊಠಡಿಯನ್ನು ಮುಚ್ಚಿಕೊಂಡಿದ್ದರು ಎಂಬ ಸಂತ್ರಸ್ತೆ ಹೇಳಿಕೆಯೇ ಮುಖ್ಯವಾಗುತ್ತದೆ. ಯಡಿಯೂರಪ್ಪ ಅವರ ಅಣತಿಯಂತೆ ಮೊಬೈಲ್ನಲ್ಲಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಮೊಬೈಲ್ ರೆಕಾರ್ಡಿಂಗ್ ನಲ್ಲಿರುವುದು ಯಡಿಯೂರಪ್ಪ ಧ್ವನಿ ಎಂದು ಬಗ್ಗೆ ಎಫ್ಎಸ್ಎಲ್ ವರದಿ ನೀಡಿದೆ. ಸಂತ್ರಸ್ತ ತಾಯಿಗೆ ರೂ. 2 ಲಕ್ಷ ರೂಪಾಯಿ ಹಣ ನೀಡಲಾಗಿದೆ. ಇಡೀ ಪ್ರಕರಣ ಕುರಿತು ಸಂತ್ರಸ್ತ ಬಾಲಕಿ ವಿವರಣೆ ನೀಡಿದ್ದಾಳೆ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅಂತಿಮವಾಗಿ ಆದೇಶ ಕಾಯ್ದಿರಿಸಿದೆ.
2024 ರ ಮಾರ್ಚ್ನಲ್ಲಿ ಯಡಿಯೂರಪ್ಪ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿಯೇ ಈ ಆರೋಪ ಮಾಡಿದ್ದರು. ನಂತರ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ವಿಷಯದ ಗಾಂಭೀರ್ಯ ಅರಿತ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ಮಧ್ಯೆ ಪ್ರಕರಣದ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ಪ್ರಕರಣದ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಇದೀಗ ಮುಕ್ತಾಯಗೊಂಡಿದ್ದು, ಆದೇಶ ಪ್ರಕಟವಾಗಬೇಕಿದೆ. ಹಾಗಾಗಿ ಈ ಪ್ರಕರಣ ಕುತೂಹಲ ಕೆರಳಿಸಿದೆ.

